Monday, April 21, 2025
Google search engine

HomeUncategorizedಹಸಿ ಸುಳ್ಳು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ

ಹಸಿ ಸುಳ್ಳು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ

ಶ್ರೀಕಾಂತ್‌ ಪೂಜಾರಿಯ 16 ಪ್ರಕರಣಗಳಲ್ಲಿ 15 ಪ್ರಕರಣ ತಾರ್ಕಿಕ ಅಂತ್ಯ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ

ಬೆಂಗಳೂರು: ಕರಸೇವಕ ಶ್ರೀಕಾಂತ್‌ ಪೂಜಾರಿ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದು, ನೈತಿಕತೆ ದೃಷ್ಟಿಯಿಂದ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಜೊತೆಗೆ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿಯವರಿಗೆ ಒಂದೋ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈ ತಪ್ಪಿ, ಕಾಣದ ಕೈಗಳು ದಿಕ್ಕು ತಪ್ಪಿಸುತ್ತಿವೆ. ಇಲ್ಲವೆಂದರೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲು ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ. ಇವೆರಡರಲ್ಲಿ ಯಾವುದು ಸತ್ಯವಾದರೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರ್ಥ. ಆದ್ದರಿಂದ ಕೂಡಲೇ ತಮ್ಮ ತಪ್ಪನ್ನು ಒಪ್ಪಿಕೊಂಡು ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು. ರಾಜ್ಯದ ಜನರಲ್ಲಿ ಕ್ಷಮಾಪಣೆ ಕೋರಿ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಬ್ಬ ಸಮರ್ಥ ಮುಖ್ಯಮಂತ್ರಿಗೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಶ್ರೀಕಾಂತ್ ಪೂಜಾರಿ ಅವರ ಮೇಲೆ ಇದ್ದ 16 ಪ್ರಕರಣಗಳಲ್ಲಿ 15 ಪ್ರಕರಣಗಳು ಈಗಾಗಲೇ ತಾರ್ಕಿಕ ಅಂತ್ಯ ಕಂಡಿದ್ದು, ಬಾಕಿ ಇರುವ ಒಂದು ಪ್ರಕರಣ ಸಹ 1992 ರಲ್ಲಿ ಅವರು ನಾಪತ್ತೆಯಾಗಿದ್ದರು ಎಂಬ ಕಾರಣಕ್ಕೆ ದಾಖಲಾಗಿತ್ತು. ಆದರೆ ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದು, ಅವರನ್ನು ಆ ಪ್ರಭು ಶ್ರೀರಾಮ ಕ್ಷಮಿಸುವುದಿಲ್ಲ ಎಂದರು.

ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ಕರಾಳೆ ಛಾಯೆಯನ್ನು ಮೂಡಿಸುತ್ತಿದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಕರಸೇವಕರನ್ನು ಹುಡುಕಿ ಹಳೆಯ ಪ್ರಕರಣಗಳಲ್ಲಿ ಬಂಧಿಸಲಾಗುತ್ತಿದೆ. ಹುಬ್ಬಳ್ಳಿಯಂತೆಯೇ ಚಿಕ್ಕಮಗಳೂರು, ಕಲಬುರ್ಗಿ ಮೊದಲಾದ ಕಡೆಗಳಲ್ಲಿ ಹೀಗೆಯೇ ಆಗುತ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಸರ್ಕಾರ ಹೇರಿದೆ ಎಂದರು.

ರಾಮಭಕ್ತರ ಉತ್ಸಾಹ, ಮೆರವಣಿಗೆ, ಮಂತ್ರಾಕ್ಷತೆ ವಿತರಣೆ ಮೊದಲಾದವು ಕಾಂಗ್ರೆಸ್‌ ನಾಯಕರ ತಲೆ ಕೆಡುವಂತೆ ಮಾಡಿದೆ. ಕರಸೇವಕರನ್ನು ಬಂಧಿಸುವ ನೀಚತನವನ್ನು ಸರ್ಕಾರ ತೋರಿದೆ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಪಿ.ಸಿ.ಮೋಹನ್‌, ರವಿಕುಮಾರ್‌ ಸೇರಿದಂತೆ ನಾವೆಲ್ಲರೂ ಕರಸೇವಕರಾಗಿದ್ದು, ತಾಕತ್ತಿದ್ದರೆ ಸರ್ಕಾರ ನಮ್ಮನ್ನು ಬಂಧಿಸಲಿ. ರಾಜ್ಯದಲ್ಲಿ ಎಲ್ಲ ಜೈಲುಗಳನ್ನು ತೆರೆದು ನಮ್ಮೆಲ್ಲರನ್ನೂ ಕಳುಹಿಸಲಿ. ರಾಮಭಕ್ತರನ್ನು ತಡೆಯುವ ಶಕ್ತಿ ಇದೆಯೇ ಎಂಬುದನ್ನು ಸರ್ಕಾರ ತೋರಿಸಲಿ ಎಂದು ಸವಾಲೆಸೆದರು.

RELATED ARTICLES
- Advertisment -
Google search engine

Most Popular