ಕಲಬುರ್ಗಿ: ಕರ್ನಾಟಕದ ಮುಖ್ಯಮಂತ್ರಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅವರು ನಿನ್ನೆ ವಿಶೇಷ ಸಂಪುಟ ಸಭೆ ನಡೆದಿದೆ. ಮುಖ್ಯಮಂತ್ರಿಗಳ ಬಹಳ ಪ್ರೀತಿಯ ವಿಷಯವಾದ ಜಾತಿ ಗಣತಿ ಕುರಿತು ತೀರ್ಮಾನ ಮಾಡಲು ಇದನ್ನು ಕರೆದಿದ್ದರು. ಆದರೆ, ಇಚ್ಛಾಶಕ್ತಿ ಇಲ್ಲದ ಕಾರಣ ಯಾವುದೇ ನಿರ್ಧಾರಕ್ಕೆ ಬರಲಿಲ್ಲ ಎಂದು ತಿಳಿಸಿದರು. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡಗಳಿಗೆ ನ್ಯಾಯ ಕೊಡುವ ಇಚ್ಛಾಶಕ್ತಿ ಇದ್ದಿದ್ದೇ ಆದರೆ, ಎಸ್‍ಟಿ ಅಭಿವೃದ್ಧಿ ನಿಗಮದಲ್ಲಿ ಇಷ್ಟು ದೊಡ್ಡ ಹಗರಣಕ್ಕೆ ಅವಕಾಶ ಕೊಡುತ್ತಿರಲಿಲ್ಲ ಎಂದು ನುಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ 150 ಕೋಟಿಯನ್ನು ಹೊರರಾಜ್ಯಕ್ಕೆ ಕಳುಹಿಸಿ ಹಗರಣ ನಡೆಯಲು ಮುಖ್ಯಮಂತ್ರಿಗಳು ಅವಕಾಶ ಕೊಡುತ್ತಿರಲಿಲ್ಲ. ದಲಿತರ ಅಭ್ಯುದಯಕ್ಕೆ ಮೀಸಲಿಟ್ಟ 38,500 ಕೋಟಿ ಅನುದಾನದ ದುರ್ಬಳಕೆಗೆ ಅವಕಾಶ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಬೆಂಕಿ ಹಚ್ಚುವ ಕೆಲಸ ಮಾಡಿದ್ದ ಮುಖ್ಯಮಂತ್ರಿ..
ತಮ್ಮ ಅಧಿಕಾರದ ಅವಧಿಯಲ್ಲಿ ಹೊಸ ಅನುಭವ ಮಂಟಪ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಸಿದ್ದರಾಮಯ್ಯನವರು 12ನೇ ಶತಮಾನದ ಅಣ್ಣ ಬಸವಣ್ಣನವರ ಕುರಿತು ಮಾತನಾಡುವ ಮೊದಲು ಸ್ವಲ್ಪ ಹಿಂದೆ ಮುಂದೆ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ತಿಳಿಸಿದರು. ಅಣ್ಣ ಬಸವಣ್ಣನವರು ಸಮ ಸಮಾಜದ ಕನಸು ಕಂಡವರು. ಅದಕ್ಕಾಗಿ ಕೈಂಕರ್ಯ ತೊಟ್ಟು ನುಡಿದಂತೆ ನಡೆದವರು. ತಾವುಗಳು ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು. ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಒಡೆಯಲು ಕೈ ಹಾಕಬಾರದಿತ್ತು ಎಂದು ಸ್ವತಃ ಡಿ.ಕೆ.ಶಿವಕುಮಾರ್ ಅವರು ಹೇಳಿ ಕ್ಷಮೆ ಕೇಳಿದ್ದರು. ಪಾಪ ಜನ ಮತ್ತೆ ಮತ ಕೊಟ್ಟರು. ಈಗ ಅಲ್ಪಸಂಖ್ಯಾತರಿಗೆ ಓಲೈಕೆ ಮಾಡುವ ದೃಷ್ಟಿಯಿಂದ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.