ಮಂಗಳೂರು(ದಕ್ಷಿಣ ಕನ್ನಡ): ಹಿಜಾಬ್ ನಿಷೇಧ ಹಿಂಪಡೆಯುವ ಮುಖ್ಯಮಂತ್ರಿ ಹೇಳಿಕೆಗೆ ಮಂಗಳೂರಲ್ಲಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, ಶಿಕ್ಷಣ ಸಂಸ್ಥೆಯಲ್ಲಿ ಎಲ್ಲರೂ ಸಮಾನರು ಅನ್ನುವ ಕಲ್ಪನೆಯಡಿ ಸಮವಸ್ತ್ರ ಇದೆ. ಸಮವಸ್ತ್ರ ಬಿಟ್ಟು ತಮಗೆ ಬೇಕಾದ ರೀತಿ ಬಟ್ಟೆ ತೊಡಲು ಅವಕಾಶ ನೀಡುತ್ತಾರೆಯೇ ? ನಾಳೆ ಮುಂಡಾಸು, ಲುಂಗಿ, ಶಾಲು ಹಾಕಿಕೊಂಡು ಬಂದರೆ ಬಿಡುತ್ತಾರೆಯೇ?ಎಂದು ಪ್ರಶ್ನಿಸಿದ ಅಗರು ಅಲ್ಪಸಂಖ್ಯಾತರಿಗೆ ಮಾತ್ರ ಹಿಜಾಬ್ ಧರಿಸಲು ಅವಕಾಶ ನೀಡುವುದು ಎಷ್ಟು ಸರಿ..?
ಹಿಜಾಬ್ ನಿಷೇಧ ಹೈಕೋರ್ಟ್ ಒಪ್ಪಿದ್ದು ಈಗ ವಿಷಯ ಸುಪ್ರೀಂ ಕೋರ್ಟಿನಲ್ಲಿದೆ. ಇದರ ಮಧ್ಯೆ ನಿಷೇಧ ವಾಪಸ್ ಪಡೆಯುವುದು ಕೋರ್ಟಿಗೆ ಅವಮಾನ ಅಲ್ಲವೇ..? ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸೋತು ಸುಣ್ಣವಾಗಿದ್ದು ಈಗ ಜನರ ಗಮನ ಬೇರೆಡೆ ಸೆಳೆಯಲು ನೋಡುತ್ತಿದೆ. ಹಿಜಾಬ್ ಹೆಸರಲ್ಲಿ ಜನರ ನಡುವೆ ಗೊಂದಲ ಎಬ್ಬಿಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದರು. ಮುಖ್ಯಮಂತ್ರಿ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ಮುಂದೆ ಗೋಹತ್ಯೆ ನಿಷೇಧವನ್ನೂ ವಾಪಸ್ ಮಾಡ್ತೀವಿ ಎನ್ನುತ್ತಾರೆ.
ಶಿಕ್ಷಣ ಸಂಸ್ಥೆಯ ಒಳಗಾದರೂ ಎಲ್ಲರೂ ಸಮಾನರು ಎನ್ನುವುದನ್ನು ತೋರಿಸುವುದು ಬಿಜೆಪಿ ನಿಲುವು ಆಗಿದೆ. ಹಿಜಾಬ್ ವಾಪಸ್ ನಿಂದ ಆಗಬಹುದಾದ ಘಟನೆಗಳಿಗೆ ಕಾಂಗ್ರೆಸ್ ಹೊಣೆ ಆಗಿದೆ ಎಂದು ಎಚ್ಚರಿಸಿದರು.