ಚಿಕ್ಕಬಳ್ಳಾಪುರ: ಜಲಪಾತ ನೋಡಲು ಆಗಮಿಸಿದ್ದ ಮಹಿಳಾ ಟೆಕ್ಕಿ ಜಾರಿಬಿದ್ದು ಕಾಲು ಮುರಿದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಜಲಪಾತದ ಬಳಿ ನಡೆದಿದೆ.
ಮುಂಬೈ ಮೂಲದ ಅರ್ಪಿತಾ ಕಾಲು ಮುರಿತಕ್ಕೊಳಗಾದ ಮಹಿಳೆ. ಈಕೆ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಅರ್ಪಿತಾ ಸ್ನೇಹಿತರೊಂದಿಗೆ ಕೇತೇನಹಳ್ಳಿ ಜಲಪಾತ ವೀಕ್ಷಿಸಲು ಬಂದಿದ್ದರು. ಜಲಪಾತದಲ್ಲಿ ಆಟವಾಡಿ ವಾಪಸ್ ಬರುವ ವೇಳೆ ಕಾಡಿನ ಮಧ್ಯೆ ಕಿರಿದಾದ ಹಾದಿಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಘಟನೆಯ ಬಳಿಕ ಕೆಲ ಯುವಕರು ಕಾಡಿನ ಮಧ್ಯದಿಂದ 2 ಕಿಲೋ ಮೀಟರ್ ಸ್ಟ್ರೆಚರ್ ಮೂಲಕ ಅರ್ಪಿತಾರನ್ನು ಹೊತ್ತು ಕಾಡಿನ ಹಾದಿಯಲ್ಲಿ ಹರಸಾಹಸ ಪಟ್ಟು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯರು, ಅಂಬುಲೆನ್ಸ್ ಚಾಲಕ ಹಾಗೂ ಪೊಲೀಸರ ಸಹಾಯದಿಂದ ಅರ್ಪಿತಾ ಅವರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣದ ಬಳಿಕ ಕೇತೇನಹಳ್ಳಿ ಫಾಲ್ಸ್‌ಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಜಲಪಾತ ನೋಡಲು ಯಾರೂ ಬಾರದಂತೆ ಅರಣ್ಯಾಧಿಕಾರಿಗಳು ಪ್ರವಾಸಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅರಣ್ಯದೊಳಗೆ ಪ್ರವೇಶ ಮಾಡದಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದು, ಸ್ಥಳದಲ್ಲೇ ಅರಣ್ಯ ಇಲಾಖೆಯ ಗಾರ್ಡ್ ನೇಮಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಅರಣ್ಯದೊಳಗೆ ಪ್ರವೇಶ ಮಾಡಬಾರದು ಎಂಬ ನಾಮಫಲಕ ಆಳವಡಿಸಲು ನಿರ್ಧರಿಸಿರುವುದಾಗಿ ಜಿಲ್ಲಾ ಅರಣ್ಯ ಇಲಾಖಾಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.