ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದೂವರೆದಿದೆ. ಶೃಂಗೇರಿ, ನರಸಿಂಹರಾಜಪುರ, ಮೂಡಿ ಗೆರೆ, ಕಳಸ ಕುದುರೆಮುಖ ಭಾಗದಲ್ಲಿ ತೀವ್ರ ಮಳೆಯಾಗುತ್ತಿದ್ದು, ಹಳ್ಳಕೊಳ್ಳ ನದಿಗಳು ತುಂಬಿ ಹರಿಯುತ್ತಿವೆ ಈ ಹಿನ್ನಲೆ ಜಿಲ್ಲೆಯಲ್ಲಿನ ಪ್ರವಾಸಿತಾಣ ಗಳಿಗೆ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಮನವಿ ಮಾಡಿದ್ದ ಜಿಲ್ಲಾಡಳಿತ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶವನ್ನು ಜು.22ರ ವರೆಗೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದ್ದು ಇಲ್ಲಿಗೆ ತೆರಳುವ ಮಾರ್ಗ ಕಿರಿದಾಗಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಜಿಲ್ಲಾಡಳಿತ ಅಗತ್ಯ ವಾಹನಗಳನ್ನು ಹೊರತುಪಡಿಸಿ (ಸ್ಥಳೀಯ ವಾಹನ) ಹೊರಗಿನಿಂದ ಬರುವ ವಾಹನಗಳಿಗೆ ಜು.22ರ ವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಒಳಿತು.