
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಶಾಲೆಯಲ್ಲಿ ಆಯೋಜನೆ ಮಾಡಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಜಿಲ್ಲಾ ಸಂಯೋಜಕ ಜಿ.ಸಿ. ನಾರಾಯಣಸ್ವಾಮಿ ಉದ್ಘಾಟಿಸಿದರು.
ಗುಂಡ್ಲುಪೇಟೆ: ಬಾಲ ಕಾರ್ಮಿಕ ಪದ್ದತಿ ದೊಡ್ಡ ಪಿಡುಗಾಗಿದ್ದು, ಪ್ರತಿಯೊಂದು ಮಗುವು ಇದರಿಂದ ಹೊರಬಂದು ತಮ್ಮ ಸುಂದರ ಬಾಲ್ಯವನ್ನು ಅನುಭವಿಸಬೇಕೆಂದು ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಜಿಲ್ಲಾ ಸಂಯೋಜಕ ಜಿ.ಸಿ. ನಾರಾಯಣಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಅಣ್ಣೂರುಕೇರಿ ಶಾಲೆಯಲ್ಲಿ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ಆಯೋಜನೆ ಮಾಡಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಕಡು ಬಡತನದಿಂದ ಪೋಷಕರು ತಮ್ಮ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮಗುವಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಬಾಲ ಕಾರ್ಮಿಕ ಪದ್ಧತಿ ಕರಾಳವಾಗಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕಡೆ ಮುಖ ಮಾಡಬೇಕು. ಇದರಿಂದ ಆತನ ಭವಿಷ್ಯವೂ ಸಹ ಉತ್ತಮ ರೀತಿಯಲ್ಲಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸೋನಿಯಾ ಬೇಗಂ ಮಾತನಾಡಿ, ಮಕ್ಕಳು ನಾನಾ ಕಾರಣಗಳಿಂದ ಬಾಲಾ ಕಾರ್ಮಿಕರಾಗುತ್ತಾರೆ. ಶಿಕ್ಷಣ ಪಡೆದರೆ ಮಾತ್ರ ತಮ್ಮ ಬದುಕನ್ನು ಸುಂದರಾಗೊಳಿಸಬಹುದು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಚಿನ್ನಯ್ಯ ಮಾತನಾಡಿ, ಮಕ್ಕಳೇ ಬಾಲಾ ಕಾರ್ಮಿಕ ಪದ್ಧತಿ ನಿರ್ಮೂಲನೆ ಪ್ರಯತ್ನ ಮಾಡಬೇಕು. ನೀವೆಲ್ಲರೂ ಸೇರಿ ದೇಶದ ಭವಿಷ್ಯ ಜೊತೆಗೆ ನಿಮ್ಮ ಭವಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರುದ್ರವ್ವ ಕೆಳಗೇರಿ, ಸೃಷ್ಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೃಷಬೆಂದ್ರ, ಕ್ರೀಯಾ ಫೌಂಡೇಶನ್‍ನ ಕಾಳಿಂಗ ಸ್ವಾಮಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು, ಶಾಲಾ ಮಕ್ಕಳು ಹಾಜರಿದ್ದರು.