Wednesday, April 9, 2025
Google search engine

Homeರಾಜ್ಯಸುದ್ದಿಜಾಲಮಕ್ಕಳ ದಸರಾ: "ದಾಖಲೆ ವೀರ" ಬಾಲ ಪ್ರತಿಭೆ ಎಚ್ ಎಸ್ ಮಹೇಶ್ ಕುಮಾರ್ ವಿಶೇಷ ಆಹ್ವಾನಿತ...

ಮಕ್ಕಳ ದಸರಾ: “ದಾಖಲೆ ವೀರ” ಬಾಲ ಪ್ರತಿಭೆ ಎಚ್ ಎಸ್ ಮಹೇಶ್ ಕುಮಾರ್ ವಿಶೇಷ ಆಹ್ವಾನಿತ ಬಾಲ ಪ್ರತಿಭೆಯಾಗಿ ಆಯ್ಕೆ

ಮೈಸೂರು: ನಗರದ ಪೂರ್ಣ ಚೇತನ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ, ಮಾಸ್ಟರ್ ಎಚ್ ಎಸ್ ಮಹೇಶ್ ಕುಮಾರ್ ಈ ಬಾರಿಯ ಮಕ್ಕಳ ದಸರಾ ಉದ್ಘಾಟನಾ ಸಮಾರಂಭದ ವಿಶೇಷ ಆಹ್ವಾನಿತ ಬಾಲ ಪ್ರತಿಭೆ ಮುಖ್ಯ ಅತಿಥಿಯಾಗಿ ಆಯ್ಕೆಯಾಗಿದ್ದಾನೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ದಸರಾ ಉಪಸಮಿತಿಗಳ ಕ್ರಿಯಾ ಯೋಜನಾ ಪರಿಶೀಲನಾ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಅಕ್ಟೋಬರ್ 6 ರಂದು ಬೆಳಗ್ಗೆ ಕಲಾ ಮಂದಿರದಲ್ಲಿ ಮಕ್ಕಳ ದಸರಾದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಪ್ರಸ್ತುತ ಪೂರ್ಣ ಚೇತನ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ಮಹೇಶ್ ಕುಮಾರ್, ಜುಲೈ 27ರಂದು ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ ರೆಕಾರ್ಡ್ಸ್ ನವರು ನಡೆಸಿದಂತಹ ವಿಶ್ವ ದಾಖಲೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಿ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನ, ಅವರ ಸಾಧನೆ ಮತ್ತು ಇಡೀ ಜಗತ್ತಿಗೆ ಅವರ ಕೊಡುಗೆಗಳ ಬಗ್ಗೆ ಸತತ 14 ಗಂಟೆ 2 ನಿಮಿಷಗಳ ಕಾಲ ಮಾತನಾಡಿ ಚಿಕ್ಕವಯಸಿಗೆ ವಿಶ್ವ ದಾಖಲೆಯನ್ನು ಮಾಡಿರುತ್ತಾನೆ.

ಮೂಲತಃ ಮೈಸೂರು ಜಿಲ್ಲೆಯ ಬನ್ನೂರು ಬಳಿ ಇರುವ ಹನುಮನಾಳು ಎಂಬ ಪುಟ್ಟ ಗ್ರಾಮದ ರೈತ ದಂಪತಿ ಸೋಮಶೇಖರ ಮತ್ತು ತಾಯಮ್ಮ ಮಗನಾದ ಮಹೇಶ್ ಕುಮಾರ್ ಎಚ್ ಎಸ್ ಎಂಬ ಬಾಲಕ ಒಂದರಿಂದ ಐದನೇ ತರಗತಿಯವರೆಗೆ ಹನುಮನಾಳಿನಲ್ಲಿ ವ್ಯಾಸಂಗ ಮಾಡಿದ್ದಾನೆ. ಬಾಲ್ಯದಲ್ಲಿ ಅಪಾರ ಜ್ಞಾನಾರ್ಜನೆಯ ತುಡಿತ ಹೊಂದಿದ್ದ, ಆತನಿಗೆ ಎಳವೆಯಲ್ಲೇ ಭಾಷಣ ಕಲೆ ಸಿದ್ಧಿಸಿತ್ತು. ಆತನ ಪ್ರತಿಭೆಗೆ ನೀರೆರೆದು ಪೋಷಿಸಿದ್ದು ಮೊದಲಿಗೆ ಆತನ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ತನುಜಾ. ಆತನ ಪ್ರತಿಭೆ ಗಮನಿಸಿದ, ಪೂರ್ಣ ಚೇತನ ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದರ್ಶನ್ ರಾಜ್ ಬಿ ತಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣದ ಅವಕಾಶ ಕಲ್ಪಿಸಿ, ಆತನಿಗೆ ಅಗತ್ಯವಾದ ಬೆಂಬಲ ನೀಡಲಾಗುತ್ತಿದೆ.

ಈ ಹನ್ನೆರಡರ ಯುವ ಪ್ರತಿಭೆ ವಿವೇಕಾನಂದರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಇತರರಿಗೂ ಸಾರುವ ಗುರಿಯನ್ನು ಹೊಂದಿದ್ದಾನೆ.

ಪೂರ್ಣ ಚೇತನ ಶಾಲೆಯ ಅಧ್ಯಕ್ಷ ಡಾ. ವಿದ್ಯಾಸಾಗರ್ ಪ್ರಕಾರ ಮಹೇಶನ ಸಾಧನೆ, ಉಳಿದ ವಿದ್ಯಾರ್ಥಿಗಳಿಗೂ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲು ಒಂದು ಪ್ರೇರೇಪಣೆ. “ಮಹೇಶನನ್ನು ಆಯ್ಕೆ ಮಾಡುವ ಮೂಲಕ, ಇಡೀ ರಾಜ್ಯಕ್ಕೆ ವಿವೇಕಾನಂದರ ಸಂದೇಶ ತಲುಪುವಂತಾಗಿದೆ,” ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ ದರ್ಶನ್ ರಾಜ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬನನ್ನ ಉದ್ಘಾಟನಾ ಸಮಾರಂಭಕ್ಕೆ ಆಯ್ಕೆ ಮಾಡಿರುವ ಕರ್ನಾಟಕ ಸರಕಾರ, ಮೈಸೂರು ಜಿಲ್ಲಾಡಳಿತ, ಹಾಗು ಶಿಕ್ಷಣ ಇಲಾಖೆಗೆ ಧನ್ಯವಾದ ಸಮರ್ಪಿಸಿದರು. “ಬಡ ಕುಟುಂಬದ ಮಹೇಶನಿಗೆ ಅಗತ್ಯ ಬೆಂಬಲ ನೀಡುವ ಮೂಲಕ, ನಾವು ಭಾರತೀಯತೆಯ ಪರಿಕಲ್ಪನೆಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುವ ಸಣ್ಣ ಅವಕಾಶ ಪಡೆದಿದ್ದೇವೆ. ಅದಕ್ಕೆ ನಾವೆಲ್ಲರಿಗೂ ಕೃತಜ್ಞರಾಗಿದ್ದೇವೆ,” ಎಂದು ತಿಳಿಸಿದರು.

ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ಶಿಕ್ಷಣದ ಮೂಲಕ ಭಾರತೀಯತೆಯ ಕಲ್ಪನೆಯನ್ನು ನಾವು ನಮ್ಮ ಶಾಲೆಯಲ್ಲಿ ಹರಡುತ್ತಿದ್ದೇವೆ. ನಮ್ಮ ಶಾಲೆಯ ಮುಖ್ಯ ಉದ್ದೇಶ, ನಮ್ಮ ಬೇರುಗಳ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ಹೆಮ್ಮೆ ಮೂಡಿಸುವುದಾಗಿದೆ,” ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular