ಮಂಗಳೂರು(ದಕ್ಷಿಣ ಕನ್ನಡ): ಕೋವಿಡ್ ಹಿನ್ನೆಲೆಯಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಪ್ರತ್ಯೇಕ ನಿರ್ಬಂಧ ಅಥವಾ ಹೊಸ ಮಾರ್ಗಸೂಚಿ ಇಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿದ್ದು, ಎಲ್ಲಾ ರೀತಿಯ ಅಗತ್ಯ ಎಚ್ಚರಿಕಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅವರು
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಅರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ರಾಜ್ಯದಲ್ಲಿ ಸದ್ಯ ಐದು ಸಾವಿರ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಗಡಿ ಜಿಲ್ಲೆಯಾದ ಮಂಗಳೂರು, ಮೈಸೂರಿಗೆ ತಲಾ 300 ಟೆಸ್ಟ್ ಉಳಿದಂತೆ ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ತಲಾ 100 ಅಥವಾ 150 ಟೆಸ್ಟ್‌ಗಳ ಗುರಿ ನೀಡಲಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿದರೆ ಉತ್ತಮ. ಆದರೆ ಯಾವುದೂ ಕಡ್ಡಾಯ ಮಾಡಲಾಗಿಲ್ಲ. ಈ ಉಪತಳಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಇದು ತೀವ್ರತೆರನಾದದ್ದು ಅಲ್ಲ ಎಂದು ಹೇಳಲಾಗಿದೆ. ಹಾಗಾಗಿ ಯಾವುದನ್ನೂ ಎಲ್ಲೂ ಕಡ್ಡಾಯ ಅಂತ ಮಾಡುತ್ತಿಲ್ಲ. ಆದರೆ ಮುಂದೆ ಯಾವುದೇ ರೀತಿಯ ತೊಂದರೆ ಆಗದಂತೆ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ ವ್ಯವಸ್ಥೆಗೂ ಅನುಕೂಲ ಎಂದವರು ಹೇಳಿದರು.