ಕೆ.ಆರ್ ನಗರ:ಸ್ವಚ್ಚತೆ ಮಾಡಲು ಸರ್ಕಾರ ನೀಡುವ ಸಲಕರಣೆಗಳನ್ನು ಬಳಸಿಕೊಂಡು ಪೌರ ಕಾರ್ಮಿಕರು ಕೆಲಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು, ಈ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದೆರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆನಂತರ ನಿಮ್ಮಗಳಿಗೆ ಇನ್ನಷ್ಟು ಸವಲತ್ತು ದೊರೆಯಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ಪಿಎಲ್‌ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೀವನ ನಿರ್ವಹಣೆಗಾಗಿ ಕೆಲಸ ಮಾಡುವ ನೀವುಗಳು ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಅದಕ್ಕಾಗಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಶಾಸಕರ ಕಛೇರಿ ವತಿಯಿಂದ ಮೂರು ತಿಂಗಳಿಗೊಮ್ಮೆ ಪೌರ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲು ನಿರ್ಧರಿಸಲಾಗಿದ್ದು ಇದರ ಸದ್ಬಳಕೆಯನ್ನು ಕಾರ್ಮಿಕರು ಮಾಡಿಕೊಳ್ಳಬೇಕು ಎಂದು ಕೋರಿದ ಶಾಸಕರು ವಸತಿ ಯೋಜನೆ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಟರ್ ಮ್ಯಾನ್ ಮತ್ತು ವಾಹನ ಚಾಲಕರನ್ನು ಖಾಯಂಗೊಳ್ಳಿಸಬೇಕು ಎಂದು ಪುರಸಭೆ ಆಡಳಿತ ಮಂಡಳಿ ಮನವಿ ಸಲ್ಲಿಸಿದ್ದು ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ನೌಕರರಿಗೆ ಅನುಕೂಲ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.
ಪೌರ ಕಾರ್ಮಿಕರಾದವರು ತಮ್ಮ ಮಕ್ಕಳನ್ನು ಇದೇ ವೃತ್ತಿಗೆ ದೂಡುವ ಬದಲು ಉತ್ತಮ ಶಿಕ್ಷಣ ಕೊಡಿಸಿ ಅವರುಗಳನ್ನು ಉನ್ನತ್ತ ಮಟ್ಟದ ಅಧಿಕಾರಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕು ಇದಕ್ಕೆ ಕ್ಷೇತ್ರದ ಶಾಸಕನಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದಲ್ಲದೆ ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.
೨೩ ವಾರ್ಡ್ಗಳ ಸುತ್ತ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು ನಗರದ ಸೌಲಭ್ಯ ಪಡೆಯಲು ಮತ್ತು ದಾಖಲಾತಿಗಾಗಿ ಸಾರ್ವಜನಿಕರು ಪುರಸಭೆಗೆ ಅಲೆಯುತ್ತಿದ್ದಾರೆ ಈ ಬಗ್ಗೆ ಮುಖ್ಯಾಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದAತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ ಶಾಸಕ ಡಿ.ರವಿಶಂಕರ್ ಸಾರ್ವಜನಿಕರಿಂದ ಅಧಿಕಾರಿಗಳು ಲಂಚ ಪಡೆಯಲು ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿ ಪೌರ ಕಾರ್ಮಿಕರ ಹಿತ ಕಾಯಬೇಕಾದ್ದದ್ದು ಸ್ಥಳೀಯ ಆಡಳಿತದ ಕರ್ತವ್ಯ ಇದಕ್ಕಾಗಿ ಸರ್ಕಾರದ ವತಿಯಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದ್ದು ಅವುಗಳನ್ನು ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೂ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಮಿಕರ ಸಹಕಾರದಿಂದ ಪಟ್ಟಣದ ಪುರಸಭೆಗೆ ಸ್ವಚ್ಚತೆಯಲ್ಲಿ ೩ ಬಾರಿ ಪ್ರಶಸ್ತಿ ಬಂದಿದೆ ಈ ಬಾರಿಯೂ ಪ್ರಶಸ್ತಿ ಪಡೆಯುವುದರ ಜತೆಗೆ ನಗರದ ಜನತೆಯ ಮೆಚ್ಚುಗೆ ಪಡೆಯಲು ಶಾಸಕರ ಮಾರ್ಗದರ್ಶನದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ ಮುಖ್ಯಾಧಿಕಾರಿಗಳು ಇದಕ್ಕೆ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸಹಕಾರ ನೀಡಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು. ದಿನಾಚರಣೆ ಅಂಗವಾಗಿ ನಡೆದ ಆಟೋಟ ಸ್ಪರ್ದೆಯಲ್ಲಿ ವಿಜೇತ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ಶಿವಕುಮಾರ್, ಸೌಮ್ಯಲೋಕೇಶ್, ಅಶ್ವಿನಿಪುಟ್ಟರಾಜು, ಉಮೇಶ್, ಶಂಕರ್, ನಟರಾಜು, ಸರೋಜಮಹದೇವ್, ವಸಂತಮ್ಮ, ಮಂಜುಳಚಿಕ್ಕವೀರು, ಇಂಜಿನಿಯರ್ ಚಂದ್ರಶೇಖರ್, ನೌಕರರಾದ ಲೋಕೇಶ್, ಗಣೇಶ್, ರಾಜೇಂದ್ರ, ರೀತುಸಿಂಗ್, ಮಂಡ್ಯರಮೇಶ್, ಯೋಗೇಶ್‌ಕುಮಾರ್ ಮತ್ತಿತರರು ಹಾಜರಿದ್ದರು.