ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೌರ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕನಿಷ್ಠ ವೇತನ ಜಾರಿಗೆ ತಂದು, ಸಫಾಯಿ ಕರ್ಮಚಾರಿ ಆಯೋಗ ರಚನೆ ಮಾಡಿ ಕಾರ್ಮಿಕರಿಗೆ ಸಾಕಷ್ಟು ಸವಲತ್ತು ನೀಡುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಪುರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರ ನೀಡುವ ಸಲಕರಣೆ ಮತ್ತು ಸವಲತ್ತುಗಳನ್ನು ಬಳಸಿಕೊಂಡು ಸ್ವಚ್ಚತೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕರ ಪರಿಶ್ರಮದಿಂದ ಪಟ್ಟಣದ ಪುರಸಭೆಗೆ ೩ನೇ ಬಾರಿ ಸ್ವಚ್ಚನಗರ ಪ್ರಶಸ್ತಿ ದೊರೆತಿದೆ ಇದಕ್ಕೆ ಕಾರಣರಾದ ಎಲ್ಲಾ ಕಾರ್ಮಿಕರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಶಾಸಕರು ನಗರವನ್ನು ಸ್ವಚ್ಚ ಮಾಡುವ ನೀವುಗಳು ಆರೋಗ್ಯದ ಬಗೆ ಹೆಚ್ಚು ಕಾಳಜಿ ವಹಿಸಿ ಆಗ್ಗಿಂದ್ದಾಗೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು ಇದನ್ನು ಬಳಕೆ ಮಾಡಿಕೊಂಡು ಮಕ್ಕಳನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳದೆ ಶಿಕ್ಷಿತರಾನನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಮನವಿ ಮಾಡಿದ ಶಾಸಕ ಡಿ.ರವಿಶಂಕರ್ ದುಷ್ಟಚಟಗಳಿಂದ ಸಾಕಷ್ಟು ದೂರವಿದ್ದು ಆರೋಗ್ಯವಂತಾಗಿ ಇರಬೇಕೆಂದು ತಿಳಿಸಿದರು.
ಸರ್ಕಾರದ ನಿಯಮದಂತೆ ಆರೋಗ್ಯ ಇಲಾಖೆಯವರು ಕಾರ್ಮಿಕರಿಗೆ ಮತ್ತು ಕುಟುಂಬದವರಿಗೆ ಆರೋಗ್ಯ ತಪಾಸಣೆ ಮಾಡಿ ಅವಶ್ಯಕವಿದ್ದವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ಸೂಚಿಸಿದ ಶಾಸಕರು ಕಾರ್ಮಿಕರಿಗಾಗಿ ಸರ್ಕಾರದಿಂದ ಬರುವ ಸಲಕರಣೆ ಮತ್ತು ಸೌಲಭ್ಯಗಳನ್ನು ಮುಖ್ಯಾಧಿಕಾರಿಗಳು ಅವರುಗಳ ಮನೆ ಬಾಗಿಲಿಗೆ ತಲುಪಿಸಬೇಕೆಂದು ತಾಕೀತು ಮಾಡಿದರು. ಪೌರಕಾರ್ಮಿಕರ ಮಕ್ಕಳು ಶಿಕ್ಷಿತರಾಗಬೇಕೆಂಬ ಹಂಬಲ ಹೊಂದಿರುವ ನಾನು ಎಲ್ಲಾ ಮಕ್ಕಳಿಗೂ ವೈಯುಕ್ತಿಕವಾಗಿ ಲ್ಯಾಪ್‌ಟಾಪ್ ನೀಡಲು ನಿರ್ಧರಿಸಿದ್ದು ಶೀಘ್ರದಲ್ಲಿಯೇ ವಿತರಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಿ, ಸರ್ಕಾರದಿಂದ ದೊರೆಯುವ ಸಲಕರಣೆಗಳನ್ನು ವಿತರಿಸಲಾಯಿತು. ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಮಾತನಾಡಿ ಸ್ವಚ್ಚತೆ ಮಾಡುವ ಪೌರ ಕಾರ್ಮಿಕರು ದೇಶದ ಸೇನಾನಿಗಳಿದಂತೆ ಎಂದು ಮಹಾತ್ಮಗಾಂಧಿಜಿ ಹೇಳಿದ್ದಾರೆ ಇದನ್ನು ಅರಿತು ಎಲ್ಲರೂ ಸ್ವಚ್ಚತೆ ಮಾಡುವುದರ ಜತೆಗೆ ತಾವು ಶುಚಿಯಾಗಿರಬೇಕೆಂದು ಕೋರಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಸಿ.ಶಂಕರ್ ಮಾತನಾಡಿದರು.
ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ(ಓಂ), ಕೆ.ಎಲ್.ಜಗದೀಶ್, ಉಮೇಶ್, ಶಿವಕುಮಾರ್, ಕೆ.ಎಸ್.ಶಂಕರ್, ವಸಂತಮ್ಮ, ನಟರಾಜು, ಮಂಜುಳ, ಮುಖಂಡರಾದ ವೃಷಬೇಂದ್ರ, ನವೀದ್, ಆದರ್ಶ, ಪುಟ್ಟರಾಜು, ಎಂ.ಲೋಕೇಶ್, ಸಫಾಯಿ ಕರ್ಮಚಾರಿ ಆಯೋಗದ ಪದಾಧಿಕಾರಿಗಳಾದ ಡಿ.ಆರ್.ರಾಜು, ದಿನೇಶ್, ನಂಜಪ್ಪ, ಪುರಸಭೆ ಕಂದಾಯಾಧಿಕಾರಿ ಜಿ.ಎಸ್.ರಮೇಶ್, ಆರೋಗ್ಯ ನಿರೀಕ್ಷಕರಾದ ಎಸ್.ಪಿ.ರಾಜೇಂದ್ರ, ಹೆಚ್.ಎಸ್.ಲೋಕೇಶ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.