ಮಂಗಳೂರು : ಸಿವಿಲ್ ಜಡ್ಜ್ ಮುಖ್ಯ ಪರೀಕ್ಷೆ ಬರೆಯಲು ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯವಾಗದ ಗರ್ಭಿಣಿ ಅಭ್ಯರ್ಥಿಯೊಬ್ಬರಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥೆಗೆ ಹೈಕೋರ್ಟ್ ನೀಡಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ. ಪರೀಕ್ಷೆ ನ. ೧೮ ಮತ್ತು ೧೯ರಂದು ನಡೆಯಲಿದ್ದು, ಮುಖ್ಯ ಪರೀಕ್ಷಾ ಕೇಂದ್ರ ಬೆಂಗಳೂರಿನಲ್ಲಿ ನಿಗದಿಯಾಗಿದೆ.
ವಕೀಲರಾದ ನೇತ್ರಾವತಿ ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದು, ಸಿವಿಲ್ ಜಡ್ಜ್ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತುಂಬು ಗರ್ಭಿಣಿಯಾಗಿರುವ ಕಾರಣ ಮುಖ್ಯ ಪರೀಕ್ಷೆ ಬರೆಯಲು ಬೆಂಗಳೂರಿಗೆ ತೆರಳಲು ಕಷ್ಟವಾಗುವ ಬಗ್ಗೆ ಹೈಕೋರ್ಟ್‌ಗೆ ಅವರು ವಿವರ ನೀಡಿದ್ದರು. ಈ ಬಗ್ಗೆ ಮಾನವೀಯತೆಯನ್ನು ಪ್ರದರ್ಶಿಸಿರುವ ಹೈಕೋರ್ಟ್ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿಯೇ ಸಕಲ ಭದ್ರತೆ ಹಾಗೂ ವ್ಯವಸ್ಥೆಯೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ನೇತ್ರಾವತಿ ಅವರು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ದ.ಕ. ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಮಾಹಿತಿ ನೀಡಿದ್ದಾರೆ.
ಪರೀಕ್ಷೆಯ ಸಂದರ್ಭ ಮೇಲ್ವಿಚಾರಕರಾಗಿ ಬೆಂಗಳೂರಿನ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ಕೂಡಾ ನಿಯೋಜಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಆರೋಗ್ಯ ಏರುಪೇರಾದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸಿದ್ಧವಿರುವಂತೆಯೂ ಹೈಕೋರ್ಟ್‌ನಿಂದ ದ.ಕ.ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶರಿಗೆ ನಿರ್ದೇಶಿಸಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ ೫೭ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ೨೦೨೩ರ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಪೂರ್ವಭಾವಿ ಪರೀಕ್ಷೆಯಲ್ಲಿ ಆರು ಸಾವಿರಕ್ಕೂ ಅಧಿಕ ವಕೀಲ ಅಭ್ಯರ್ಥಿಗಳು ಭಾಗಿಯಾಗಿದ್ದರು. ಇವರಲ್ಲಿ ೧೦೨೨ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಅದರಂತೆ ಮಂಗಳೂರಿನ ವಕೀಲೆ ನೇತ್ರಾವತಿ ಅವರೂ ನ. ೧೮ ಮತ್ತು ೧೯ರಂದು ಬೆಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಬೆಂಗಳೂರಿಗೆ ತೆರಳಿ ಪರೀಕ್ಷೆ ಬರೆಯಲು ಕಷ್ಟ ಸಾಧ್ಯವಾದ ಕಾರಣ ನೇತ್ರಾವತಿ ಅರು ಹೈಕೋರ್ಟ್ ನೇಮಕಾತಿ ಸಮಿತಿಗೆ ಮಂಗಳೂರಿನಲ್ಲಿಯೇ ಪರೀಕ್ಷೆ ಬರೆಯಲು ಅನುಮತಿಗೆ ವಿನಂತಿಸಿದ್ದರು.