ಚಾಮರಾಜನಗರ: ನಗರ ಪ್ರದೇಶಗಳು ಸ್ವಚ್ಛವಾಗಿ ಕಾಣವುದಕ್ಕೆ ಪ್ರಮುಖ ಕಾರಣವೇ ಪೌರಕಾರ್ಮಿಕರು ಹೀಗಾಗಿ ಪೌರಕಾರ್ಮಿಕರೇ ನಗರದ ಸ್ವಚ್ಛತೆಯ ಜೀವನಾಡಿಗಳು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನಗರಾಭಿವೃದ್ದಿ ಕೋಶದ ವತಿಯಿಂದ ಆಯೋಜಿಸಿದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಸೇವೆಯು ಅನನ್ಯವಾಗಿದೆ. ಯಾವ ಕೆಲಸವು ಕೀಳಲ್ಲ ಯಾವುದೇ ಕೆಲಸವು ಮೇಲೂ ಅಲ್ಲ. ಪ್ರತಿ ಕೆಲಸಕ್ಕೂ ಗೌರವವಿದೆ. ಪೌರಕಾರ್ಮಿಕರ ದಿನನಿತ್ಯದ ಕೆಲಸಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕು. ಬಸವಣ್ಣನವರು ಅಂದಿನ ಕಾಲದಲ್ಲಿಯೇ ಪ್ರತಿ ಕಾಯಕಗಳಿಗೂ ಗೌರವ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಸಂದೇಶಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಂಡಾಗ ಉತ್ತಮ ನಡೆತೆ ಮೈಗೂಡಿಸಿಕೊಳ್ಳಬಹುದು ಎಂದರು.
ಕಾಲ ಬದಲಾದಂತೆ ಅಭ್ಯಾಸಗಳನ್ನು ಬಲಾಯಿಸಿಕೊಳ್ಳಬೇಕು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಉತ್ತೇಜಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರುವಂತಾಗÀಬೇಕು. ಸರ್ಕಾರದ ಹಲವಾರು ಅನುದಾನ, ಯೋಜನೆಗಳ ಪ್ರಯೋಜನ ಪಡೆದು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಪೌರಕಾರ್ಮಿಕರು ನಗರ ಹಾಗೂ ಪಟ್ಟಣಗಳ ಸ್ವಚ್ಛತೆಯ ಜೊತೆಗೆ ವೈಯಕ್ತಿಕ ಆರೋಗ್ಯಕ್ಕೂ ಹೆಚ್ಚಿನ ಗಮನವಹಿಸಬೇಕು. ಸುತ್ತಮುತ್ತಲಿನ ಸ್ವಚ್ಛತೆ ಹಾಗೂ ಕುಟುಂಬದ ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ನೀಡಬೇಕು. ಪೌರಕಾರ್ಮಿಕರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಬೇಕು ಎಂದರು.
ಇದೇ ವೇಳೆ ಉತ್ತಮ ಕೆಲಸ ಹಾಗೂ ಕೋವಿಡ್ ತುರ್ತು ಸಂದರ್ಭದಲ್ಲಿ ಅತ್ಯುನ್ನತ ಕಾರ್ಯನಿರ್ವಹಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ನೌಕರರಿಗೆ ವಿಶೇಷ ಭತ್ಯೆ ನೀಡಲಾಯಿತು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಪೌರಕಾರ್ಮಿಕರಿಗೆ ವೈಯಕ್ತಿಕವಾಗಿ ಸೀರೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಹಾಯಧನ ನೀಡಿದರು. ನಗರಸಭೆಯ ಸದಸ್ಯ ಮನೋಜ್ ಪಟೇಲ್, ಕುಮುದಾ, ಚಿನ್ನಮ್ಮ, ಗಾಯಿತ್ರಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.