Saturday, April 19, 2025
Google search engine

Homeರಾಜ್ಯಸುದ್ದಿಜಾಲಪೌರಕಾರ್ಮಿಕರು ಕಾಯಕ ಯೋಗಿಗಳು: ಇಕ್ಬಾಲ್ ಹುಸೇನ್

ಪೌರಕಾರ್ಮಿಕರು ಕಾಯಕ ಯೋಗಿಗಳು: ಇಕ್ಬಾಲ್ ಹುಸೇನ್

ರಾಮನಗರ: ಹಗಲು ರಾತ್ರಿ, ಬಿಸಿಲು ಮಳೆ ಎನ್ನದೇ ತನ್ನ ಪ್ರಾಣವನ್ನು ಹೊತ್ತೆಯಿಟ್ಟು ನಮ್ಮ ಆರೋಗ್ಯಕ್ಕಾಗಿ, ನಮ್ಮ ನಗರದ ಸ್ವಚ್ಛತೆಗಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ಕಾಯಕ ಯೋಗಿಗಳು ಎಂದು ರಾಮನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ತಿಳಿಸಿದರು.

ಅವರು ಇಂದು ನಗರದ ಡಾ. ಬಿ.ಅರ್. ಅಂಬೇಡ್ಕರ್ ಭವನದಲ್ಲಿ ರಾಮನಗರ ನಗರಸಭೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ (ರಿ), ರಾಮನಗರ ಶಾಖೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿದಿನ ಬೆಳಗ್ಗೆ ಕಾಯಕವೇ ಕೈಲಾಸ ಎಂದು ಶ್ರಮಿಸುತ್ತಿರುವ ಪೌರಕಾರ್ಮಿಕರು ಕಾಯಕ ಯೋಗಿಗಳು. ಕರೋನಾ ಸಂದರ್ಭದಲ್ಲಿ ಇವರ ಸೇವೆ ಅನನ್ಯ, ನಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ನಮ್ಮ ನಗರಗಳ ಸ್ವಚ್ಛತೆಯನ್ನು ಮಾಡುತ್ತಿದ್ದರು ಎಂದರು.

ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೂ ಒಂದು ನೆಲೆ, ಸೂರು ಮಾಡಿಕೊಡಬೇಕೆಂಬುದು ನಮ್ಮ ಆಶಯವಾಗಿದೆ. ಪೌರಕಾರ್ಮಿಕರು ವಾಸಿಸುತ್ತಿರುವ ಮನೆಗಳು ತುಂಬಾ ಹಳೇಯದಾಗಿದ್ದು, ಅವುಗಳನ್ನು ದುರಸ್ಥಿಗೊಳಿಸಬೇಕೆಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮನೆ ಇಲ್ಲದ ಪೌರಕಾರ್ಮಿಕರಿಗೆ ೧ ಎಕರೆ ೧೪ ಗುಂಟೆ ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಶೀಘ್ರದಲ್ಲೇ ಮನೆ ಇಲ್ಲದ ಪೌರಕಾರ್ಮಿಕರಿಗೆ ಮನೆ, ಸೈಟ್‌ಗಳನ್ನು ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರು ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳಲು ವಿಶ್ರಾಂತಿ ಗೃಹ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪೌರಕಾರ್ಮಿಕರನ್ನು ಪ್ರೀತಿ ವಿಶ್ವಾಸದಲ್ಲಿ ಮಾತನಾಡಬೇಕು. ಎಲ್ಲಾ ನಗರಗಳು ಸ್ವಚ್ಛತೆಯಿಂದ ಇರಲು ಪೌರಕಾರ್ಮಿಕರೇ ಕಾರಣರು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಪೌರಕಾರ್ಮಿಕರು ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು. ಪೌರಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ಲೌಸ್, ಶೂ ಸೇರಿದಂತೆ ಎಲ್ಲಾ ರಕ್ಷಣಾ ಉಪಕರಣಗಳನ್ನು ನೀಡಲಾಗಿದ್ದು, ಅವುಗಳನ್ನು ಬಳಸಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ನಂದನ ಸಂಸ್ಥೆಯವರು ಜಲಗಾರ ನಾಟಕ ಪ್ರದರ್ಶನ ಮಾಡಿದರು. ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಮನಗರ ನಗರಸಭೆ ಅಧ್ಯಕ್ಷರಾದ ವಿಜಯ ಕುಮಾರಿ, ಉಪಾಧ್ಯಕ್ಷರಾದ ಸೋಮಶೇಖರ್ ಸಿ (ಮಣಿ), ಕರ್ನಾಟಕ ರಾಜ್ಯ ಪೌರಕಾರ್ಮಿಕ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ್, ರಾಜ್ಯ ಉಪಾಧ್ಯಕ್ಷರಾದ ಆರ್. ನಾಗರಾಜು, ಸದಸ್ಯರಾದ ಶಿವಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ. ರಾಮನಗರ ನಗರಸಭೆ ಪೌರಾಯುಕ್ತರಾದ ಎಲ್. ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular