ಅಹಮದಾಬಾದ್: ಲೋಕಸಭೆ ಚುನಾವಣೆಗೆ ದೇಶದಲ್ಲಿ ಮೂರನೇ ಹಂತದ ಮತ್ತು ರಾಜ್ಯದಲ್ಲಿ ಎರಡನೇ ಹಂತದ ಮಾತದಾನ ಪ್ರಕ್ರಿಯೆ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತದಾನ ಮಾಡಿದರು. ಪ್ರಧಾನಿ ಮೋದಿಯವರು ಬರುತ್ತಿದ್ದಂತೆ ಮತಗಟ್ಟೆ ಬಳಿ ನೆರದಿದ್ದ ಜನರು ಮೋದಿ ಮೋದಿ ಅಂತ ಕೂಗಲು ಆರಂಭಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮತದಾನ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ವಿಶೇಷವಾಗಿದೆ.
ಮತದಾನದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 3ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮತದಾನ ಅನ್ನೋದು ಸಾಮಾನ್ಯ ದಾನ ಅಲ್ಲ, ಶ್ರೇಷ್ಠ ದಾನಗಳಲ್ಲಿ ಒಂದು. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿ. ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.
ಮತದಾರರ ಸಕ್ರಿಯ ಭಾಗಿತ್ವ ಚುನಾವಣೆಯನ್ನು ಮತ್ತಷ್ಟು ರೋಮಾಂಚನಗೊಳಿಸುತ್ತೆ. ಮತದಾನದ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ಅಭಿನಂದನೆ. ಬಿಸಿಲಿನ ತಾಪ ಹೆಚ್ಚಿದ್ದು ಮತದಾರರು ಹೆಚ್ಚು ನೀರು ಕುಡಿದು ದಣಿವಾರಿಸಿಕೊಳ್ಳಿ ಎಂದರು.
ಮಾಧ್ಯಮ ಪ್ರತಿನಿಧಿಗಳು ಹಗಲು-ರಾತ್ರಿ ಎನ್ನದೆ ಸುದ್ದಿ ಪ್ರಸಾರ ಮಾಡುತ್ತೀರಿ. ಬಿಸಿಲು ಜಾಸ್ತಿ ಇದೆ, ನಿಮ್ಮ ಆರೋಗ್ಯದ ಬಗ್ಗೆ ಲಕ್ಷ ವಹಿಸಿ. ನೀರು ಜಾಸ್ತಿ ಕುಡಿಯಿರಿ ಎಂದು ಸಲಹೆ ನೀಡಿದರು.
ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.