ಬೆಂಗಳೂರು: ಹೊಸ ವರ್ಷಾಚರಣೆ ಬಳಿಕ ಪಾನಮತ್ತ ಸ್ನೇಹಿತರ ನಡುವೆ ಶುರುವಾದ ಗಲಾಟೆ ವ್ಯಕ್ತಿಯೊಬ್ಬನ ಹತ್ಯೆಯಲ್ಲಿ ಕೊನೆಗೊಂಡ ಘಟನೆ ಹನುಮಂತನಗರ ಠಾಣಾ ವ್ಯಾಪ್ತಿಯ ಶ್ರೀನಿವಾಸ ನಗರ ಬಸ್ ನಿಲ್ದಾಣದ ಬಳಿ ಕಳೆದ ತಡರಾತ್ರಿ ನಡೆದಿದೆ.
ಮೃತರನ್ನು ವಿಜಯ್ (21) ಎಂದು ಗುರುತಿಸಲಾಗಿದೆ.
ವಿಜಯ್ ಹಾಗೂ ಆತನ ಗೆಳೆಯರು ಹೊಸ ವರ್ಷಾಚರಣೆ ಮಾಡಿದ್ದಾರೆ. ಮನೆಗೆ ತೆರಳುವಾಗ ವಿಜಯ್ ಹಾಗೂ ಆತನ ಗೆಳೆಯರ ನಡುವೆ ಗಲಾಟೆ ಆರಂಭವಾಗಿದೆ. ಆಟೋದಲ್ಲಿ ತೆರಳುತ್ತಿದ್ದಾಗ ಈ ಗಲಾಟೆ ಅತಿರೇಕಕ್ಕೆ ಹೋಗಿದ್ದು, ವಿಜಯ್ ನ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಬಳಿಕ ಶ್ರೀನಿವಾಸನಗರ ಬಸ್ ನಿಲ್ದಾಣದೆದುರು ಆತನನ್ನು ಆಟೋದಿಂದ ಹೊರತಳ್ಳಿ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿಜಯ್ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹನುಮಂತನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.