ಬೆಂಗಳೂರು : ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ಜೋರಾಗಿದ್ದು, ಇದೀಗ ಈ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಳ್ಳಾರಿ ಗಲಭೆ ವಿಚಾರದಲ್ಲಿ ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಸಭೆ ನಡೆಸಬೇಕಿತ್ತು. ಬದಲಿಗೆ ಡಿಸಿಎಂ ಡಿಕೆ ಶಿವಕುಮಾರ್ ಬಳ್ಳಾರಿಗೆ ತೆರಳಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಸರಿಯಲ್ಲ, ಇದು ಶಿಷ್ಠಾಚಾರದ ಉಲ್ಲಂಘನೆ ಅಲ್ವಾ ಮಿಸ್ಟರ್ ಡಿಕೆಶಿ ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದ್ದರೂ ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದು ಸರಿ, ಆದರೆ ಎನ್ನುತ್ತಾ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನೂ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಡಿಕೆ ಶಿವಕುಮಾರ್ ನಡೆಸಿದ ಸಭೆ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು, ಕುಮಾರಸ್ವಾಮಿ ಹೇಳಿರೋದು ಕಾನೂನಾತ್ಮಕವಾಗಿ ಸರಿ ಇರಬಹುದು. ಆದರೆ ಡಿಕೆಶಿ ಅವರು ಸರ್ಕಾರದ ಪ್ರತಿನಿಧಿಯಾಗಿ ಅಲ್ಲಿಗೆ ಹೋಗಿರೋದನ್ನ ತಪ್ಪು ಅಂತ ಹೇಳಲು ಆಗಲ್ಲ ಎಂದಿದ್ದಾರೆ.
ಮುಂದುವರೆದು ಡಿಕೆ ಶಿವಕುಮಾರ್ ಅವರು ಜವಾಬ್ದಾರಿಯುತ ಸಚಿವರು, ಡಿಸಿಎಂ ಹಾಗೂ ಕ್ಯಾಬಿನೆಟ್ ಸಚಿವರು. ನಾನು ಹೋಗಲು ಆಗಲಿಲ್ಲ ಅಂತ ಡಿಕೆ ಶಿವಕುಮಾರ್ ಹೋಗಿದ್ದಾರೆ. ಡಿಕೆಶಿ ಸರ್ಕಾರದ ಪ್ರತಿನಿಧಿಯಾಗಿ, ಮಾನವೀಯತೆ ದೃಷ್ಟಿಯಿಂದ ಹೋಗಿದ್ದಾರೆ. ಅದು ತಪ್ಪು ಅನ್ನೋದು ಸರಿಯಲ್ಲ. ಅದಕ್ಕೆಲ್ಲ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಡಿಕೆ ಶಿವಕುಮಾರ್ ಪರವಾಗಿ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದಾರೆ.
ನಾನು ಸಂಬಂಧ ಪಟ್ಟ ಇಲಾಖೆ ಸಚಿವ, ನಾನು ಹೋಗಿದ್ದರೆ ಅವರ ಪರ ಇವರ ಪರ ಮಾತಾಡಿದ್ರು ಅಂತ ಆರೋಪ ಬರುತ್ತೆ. ನಮ್ಮ ಹಸ್ತಕ್ಷೇಪ ಆಗದಿರಲಿ, ತನಿಖೆ ನಡೆಯಲಿ ಅಂತ ನಾನು ತಕ್ಷಣ ಘಟನೆ ಸ್ಥಳಕ್ಕೆ ಹೋಗಿಲ್ಲ. ನಾನು ಯಾವುದೇ ಘಟನೆ ಆದಾಗ ತಕ್ಷಣ ಹೋಗಲ್ಲ, ತೀರಾ ತುರ್ತು ಸಂದರ್ಭ ಇದ್ದರೆ ಮಾತ್ರ ಹೋಗೋದು. ಬಳ್ಳಾರಿಗೂ ನಾನು ಇದೇ ಕಾರಣಕ್ಕೆ ಇನ್ನೂ ಹೋಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.



