ಗುಂಡ್ಲುಪೇಟೆ: ಪಟ್ಟಣ ಪುರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಡಿ.ದೇವರಾಜ ಅರಸು ಕ್ರೀಡಾಂಗಣದ ಸುತ್ತಮುತ್ತಲ ಒತ್ತುವರಿ ತೆರವು ಮಾಡಬೇಕೆಂದು ಪುರಸಭೆ ಸದಸ್ಯ ಎಚ್.ಆರ್.ರಾಜಗೋಪಾಲ್ ಆಗ್ರಹಿಸಿದ್ದಾರೆ.
ಡಿ.ದೇವರಾಜ ಅರಸು ಕ್ರೀಡಾಂಗಣದ ಸುತ್ತುಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಯುವಜನ ಕ್ರೀಡಾ ಇಲಾಖೆಯಿಂದ 1.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇತ್ತೀಚಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಕಾಮಗಾರಿ ಆರಂಭಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ನಂತರ ಗುತ್ತಿಗೆದಾರರು ಕೆಲಸವನ್ನು ಸಹ ಪ್ರಾರಂಭ ಮಾಡಿದ್ದಾರೆ. ಆದರೆ ಕ್ರೀಡಾಂಗಣದ ಮೂಲ ಸ್ವರೂಪದ ಬದಲು ಪ್ರಸ್ತುತ ಇರುವ ಜಾಗಕ್ಕೆ ಅನುಗುಣವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರಿದರು.

ಕ್ರೀಡಾಂಗಣದ ಸುತ್ತಲ ವಿಸ್ತೀರ್ಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ವೇದಿಕೆ ಮೆಟ್ಟಲುಗಳ ಹಿಂಬದಿಯಲ್ಲಿರುವ ಮನೆಗಳು ಹಾಗೂ ಅಕ್ಕಪಕ್ಕ ಒತ್ತುವರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಪುರಸಭೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಕೂಡಲೇ ಅಳತೆ ನಡೆಸಿ ಒತ್ತುವರಿ ಜಾಗವನ್ನು ತೆರವುಗೊಳಿಸಿ ಸರ್ಕಾರ ಆಸ್ತಿಯನ್ನು ಉಳಿಸುವ ಜೊತೆಗೆ ಕ್ರೀಡಾ ಚಟುವಟಿಕೆ ಉತ್ತಮ ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಮಾಡಿರುವ ಅಳತೆಗೆ ಅನುಗುಣವಾಗಿ ಡಿ.ದೇವರಾಜ ಅರಸು ಕ್ರೀಡಾಂಗಣದ ಸುತ್ತಲು ಸುತ್ತುಗೋಡೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಒತ್ತುವರಿಯಾಗಿರುವ ಸಂಬಂಧ ಪುನಃ ಅಳತೆ ನಡೆಸಿ ಒತ್ತುವರಿ ತೆರವುಗೊಳಸಲು ಕ್ರಮ ವಹಿಸಲಾಗುವುದು.
ಶಿವಸ್ವಾಮಿ, ಕ್ರೀಡಾಧಿಕಾರಿ, ಚಾಮರಾಜನಗರ.
ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದ ಸುತ್ತಲು ಅಳತೆ ನಡೆಸಿ ಒತ್ತುವರಿ ಕಂಡು ಬಂದರೆ ತೆರವುಗೊಳಿಸುವ ಕೆಲಸ ಮಾಡಲಾಗುವುದು.
ಶರವಣ, ಪುರಸಭೆ ಮುಖ್ಯಾಧಿಕಾರಿ. ಗುಂಡ್ಲುಪೇಟೆ