ಪಿರಿಯಾಪಟ್ಟಣ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ರಾಜಕಾಲುವೆ ಸೇರಿದಂತೆ ಸರ್ಕಾರಿ ನೀರು ಹರಿಯುವ ಕೊಲ್ಲಿಗಳನ್ನು ಒತ್ತುವರಿ ಮಾಡಿಕೊಂಡಿರುವ ಕಾರಣದಿಂದ ಅನೇಕ ಮನೆಗಳು, ಮಳಿಗೆಗಳು ಜಲಾವೃತವಾಗಿದ್ದು ಯಾರ ಮುಲಾಜಿಲ್ಲದೆ ಕೂಡಲೇ ತೆರವುಗೊಳಿಸುವಂತೆ ತಹಶೀಲ್ದಾರ್ ಕುಂಜಿ ಅಹಮದ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಕುಟ್ಟುತ್ತೀರ ಮುತ್ತಪ್ಪ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ರಾಜ್ಯ ಹೆದ್ದಾರಿಯ ಬೆಟ್ಟದಪುರ-ಹಾಸನ ಮುಖ್ಯರಸ್ತೆ ಹಾಗೂ ಸಂತೆಮಾಳದ ಕೆ.ವೆಂಕಟೇಶ್ ಮಾರುಕಟ್ಟೆ, ತಾಲೂಕಿನ ಕೊಪ್ಪ-ಗಿರಗೂರು ರಸ್ತೆ, ಆವರ್ತಿ ಸೇತುವೆ, ದಿಂಡಗಾಡು ಸೇತುವೆ ಜಲಾವೃತಗೊಂಡ ಹಿನ್ನೆಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಹುಭಾಗ ಜಲಾವೃತಗೊಂಡು, ರಸ್ತೆಗಳು, ಮನೆಗಳು, ಮಳಿಗೆಗಳು, ಜಮೀನುಗಳು ಮುಳುಗಡೆಯಾದ ಕಾರಣ ಅಪಾರ ಪ್ರಮಾಣದ ಬೆಳೆಹಾನಿ ಹಾಗೂ ರಸ್ತೆ ಮನೆಗಳು ಮುಳುಗಡೆಯಾಗಿರುವ ಕಾರಣ ಜನಜೀವನ ಅಸ್ತವ್ಯಸ್ತವಾಗಿದ್ದು ಈ ಬಗ್ಗೆ ಕೂಡಲೇ ಅಧಿಕಾರಿಗಳು ಜನರ ಕಷ್ಟಗಳನ್ನು ಆಲಿಸಬೇಕು ಹಾಗೂ ಅಗತ್ಯ ನೆರವುಗಳನ್ನು ಒದಗಿಸಿಕೊಡಬೇಕು ಎಂದು ಸೂಚನೆ ನೀಡಿದರು.
ಪಟ್ಟಣದಲ್ಲಿ ನೀರು ಹರಿಯುವ ರಾಜಕಾಲುವೆಯನ್ನು ಅನೇಕ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣದಿಂದ ದೊಡ್ಡಕೆರೆ – ಚಿಕ್ಕಕೆರೆ ನೀರು ಜಾಗವನ್ನು ಹರಿಯುವ ಕೊಲ್ಲಿಗಳ ಒತ್ತುವರಿ ಮಾಡಿಕೊಂಡು ನೀರು ಸರಾಗವಾಗಿ ಹರಿಯಲು ತೊಂದರೆಯಾಗಿ ಸಂತೆಪೇಟೆಯಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ಮನೆಗಳು ಹಾಗೂ ರಸ್ತೆಗಳು ಜಲಾವೃತಗೊಳ್ಳುತ್ತಿವೆ ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ರಾಜಕಾಲುವೆ ಹಾಗೂ ಅತಿಕ್ರಮವಾಗಿರುವ ಜಾಗಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಕುಂಜಿ ಅಹಮದ್ ಅವರಿಗೆ ಸೂಚನೆ ನೀಡಿದ್ದರು.

ಈ ಬಗ್ಗೆ ಸಾರ್ವಜನಿಕರು ಮಾತನಾಡಿ 2019-2020 ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ತಾಲ್ಲೂಕಿನ ಕೊಪ್ಪದಿಂದ ಗಿರಗೂರು ಸೇತುವೆ ನಿರ್ಮಾಣಕ್ಕೆ 1.75 ಕೋಟಿ, ಆವರ್ತಿ ಸೇತುವೆ ನಿರ್ಮಾಣಕ್ಕೆ 2 ಕೋಟಿ ಹಾಗೂ ದಿಂಡಗಾಡು ರಸ್ತೆ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ವೆಚ್ಚದಲ್ಲಿ ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೇತುವೆಯ ಅವೈಜ್ಞಾನಿಕ ನಿರ್ಮಾಣ ಹಾಗೂ ಸೇತುವೆಯನ್ನು ಎತ್ತರಗೊಳಿಸದ ಹಿನ್ನೆಲೆಯಲ್ಲಿ ಮಳೆ ಬಿದ್ದಂತ ಸಂದರ್ಭದಲ್ಲಿ ಮುಳುಗಡೆ ಗೊಂಡು ಜನಜೀವನ ಅಸ್ತವ್ಯಸ್ತ ಗೊಳ್ಳುತ್ತದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್ ಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶದ ಸೇತುವೆಗಳ ಮರು ನಿರ್ಮಾಣ ಹಾಗೂ ಆಗಿರುವ ಪ್ರಮಾದವನ್ನು ಸರಿ ಪಡಿಸಬೇಕು ಹಾಗೂ ಕೂಡಲೇ ಸೇತುವೆಯನ್ನು ಎತ್ತರಗೊಳಿಸಬೇಕು ಎಂದು ಎಚ್ಚರಿಕೆ ನೀಡಿದ ಅವರು,
ಈ ಸಂದರ್ಭದಲ್ಲಿ ತಹಶೀಲ್ದಾರ್ ಕುಂಜಿ ಅಹಮದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ನಿರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನವೀನ್, ಗೋಕುಲ್, ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಎಇಇಗಳಾದ ವೆಂಕಟೇಶ್, ದಿನೇಶ್, ರಂಗಯ್ಯ, ಮಲ್ಲಿಕಾರ್ಜುನ್, ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಹಿತೇಂದ್ರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.