ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಕಾಲೇಜು ಪೋರ್ಟಲ್, ಮೊಬೈಲ್ ಆ್ಯಪ್ ಮತ್ತು ಚಾಟ್ ಬಾಟ್ ಉಪಕ್ರಮಗಳಿಂದ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿ ಉಂಟಾಗುವ ಅನಗತ್ಯ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಸೋಮವಾರ ಇಲ್ಲಿನ ಉನ್ನತ ಶಿಕ್ಷಣ ಪರಿಷತ್ತಿನ ಸಭಾಂಗಣದಲ್ಲಿ ಕಾಲೇಜು ಪೋರ್ಟಲ್, ಮೊಬೈಲ್ ಆ್ಯಪ್ ಮತ್ತು ಚಾಟ್ ಬಾಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ತಂತ್ರಾಂಶಗಳಿಂದ ವಿದ್ಯಾರ್ಥಿಗಳಿಗೆ ಕಾಲೇಜುಗಳ ಬಗ್ಗೆ ನಿಖರವಾದ ಸಮಯದಲ್ಲಿ ಖಚಿತವಾದ ಮಾಹಿತಿ ಲಭ್ಯವಾಗುತ್ತದೆ. ಅನಗತ್ಯ ಗೊಂದಲಕ್ಕೆ ತೆರೆ ಬೀಳುತ್ತದೆ. ಇನ್ನು ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎಂದರು.
ಕಾಲೇಜು ಪೋರ್ಟಲ್:
ವಿದ್ಯಾರ್ಥಿಗಳು ಕಾಲೇಜು ಆಯ್ಕೆ ಮಾಡಲು ಗೊಂದಲ ಅನುಭವಿಸುತ್ತಿದ್ದರು. ಈ ಹೊಸ ಪೋರ್ಟಲ್‌ನಲ್ಲಿ ಕಾಲೇಜುಗಳ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಗ್ರಂಥಾಲಯ, ಪ್ರಯೋಗಾಲಯ, ಹಾಸ್ಟೆಲ್, ಸಿಬ್ಬಂದಿ ವಿವರ, ಹಾಗೂ ಕೋರ್ಸ್‌ವಾರು ಶುಲ್ಕದ ಮಾಹಿತಿ ಲಭ್ಯವಿದೆ. ಅಲ್ಲದೆ, ಅನಧಿಕೃತವಾಗಿ ಹೆಚ್ಚುವರಿ ಶುಲ್ಕ ವಸೂಲಿಗೆ ವಿರುದ್ಧ ದೂರು ದಾಖಲಿಸಲು ಲಿಂಕ್ ಸಹ ನೀಡಲಾಗಿದೆ.
ಮೊಬೈಲ್ ಆ್ಯಪ್:
ಮೊಬೈಲ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ, ಆಪ್ಷನ್ ಎಂಟ್ರಿ, ಛಾಯ್ಸ್ ಫಿಲಿಂಗ್, ಶುಲ್ಕ ಪಾವತಿ ಮುಂತಾದ ಪ್ರಕ್ರಿಯೆಗಳನ್ನು ಮಾಡಬಹುದು. ಕೆಇಎ ವೆಬ್‌ಸೈಟ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಬಹುದು. ಈ ಆ್ಯಪ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯಕರಾಗಿದ್ದು, ಸೈಬರ್ ಸೆಂಟರ್ ಅವಲಂಬನೆಯ ಅಗತ್ಯವಿಲ್ಲದಂತೆ ಮಾಡಲಿದೆ.
ಚಾಟ್‌ಬಾಟ್ (https://kea-bot.com):
ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಉಪಕ್ರಮದಿಂದ ವಿದ್ಯಾರ್ಥಿಗಳು ತಮಗೆ ಇರುವ ಪ್ರಶ್ನೆಗಳಿಗೆ ತಕ್ಷಣ ಉತ್ತರ ಪಡೆಯಬಹುದು. ಈ ಚಾಟ್‌ಬಾಟ್‌ನ್ನು ಪ್ರಾಯೋಗಿಕವಾಗಿ ಆರಂಭಿಸಿದಾಗಿನಿಂದ 1.35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗ ಮಾಡಿದ್ದಾರೆ. ಇದರಿಂದ ಕೆಇಎ ಕಚೇರಿಗೆ ಭೇಟಿ ನೀಡುವ ಅಗತ್ಯವೂ ಕಡಿಮೆಯಾಗುತ್ತದೆ.
ಕೌಶಲ ಶುಲ್ಕ ಪರಿಷ್ಕರಣೆ:
ವಿದ್ಯಾರ್ಥಿಗಳಿಗೆ ನೀಡುವ ಕೌಶಲ ಆಧಾರಿತ ತರಬೇತಿಗೆ ವಿಧಿಸಲಾಗುತ್ತಿರುವ ಹೆಚ್ಚುವರಿ ಶುಲ್ಕವನ್ನು ಮುಂದಿನ ವರ್ಷ ಪರಿಷ್ಕರಿಸಲಾಗುವುದು. ಕಾಲೇಜುಗಳಲ್ಲಿ ನೀಡಲಾಗುವ ತರಬೇತಿಯ ಪರಿಶೀಲನೆಯ ನಂತರ ಶುಲ್ಕ ನಿಗದಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸದ್ಯ ಈ ಪ್ಲಾಟ್‌ಫಾರ್ಮ್‌ಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುವುದರಿಂದ, ಭವಿಷ್ಯದಲ್ಲಿ ಕನ್ನಡದ ಅವತರಣಿಕೆ ಆರಂಭಿಸಲಾಗುವುದು. ಬಿಎಸ್‌ಎನ್‌ಎಲ್ ಇದರ ನಿರ್ವಹಣೆಯ ಹೊಣೆ ಹೊತ್ತಿದೆ.
– ಎಚ್. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ