ಬೆಂಗಳೂರು : ಡಿಕೆಶಿಯಿಂದ ಕುರ್ಚಿ ಉಳಿಸಿಕೊಳ್ಳೋಕೆ ಸಿಎಂ ಸಿದ್ದರಾಮಯ್ಯ ಅವರು ಐದೈದು ದಿನ ಉಪಚುನಾವಣೆ ಪ್ರಚಾರ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆಶಿಯಿಂದ ಕುರ್ಚಿ ಉಳಿಸೊಕೊಳ್ಳಲು ಸಿಎಂ ಅವರು ಐದೈದು ದಿನ ಉಪಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಿ ಡಿಕೆಶಿ ತಮ್ಮ ಕುರ್ಚಿ ಕಿತ್ತಿಕೊಳ್ಳುತ್ತಾರೆ ಎಂಬ ಆತಂಕದಲ್ಲಿ ಐದೈದು ದಿನ ಪ್ರಚಾರ ಮಾಡ್ತಿದ್ದಾರೆ. ಎರಡೂ ಕಡೆಯೂ ಕಾಂಗ್ರೆಸ್ ಸೋತರೆ ಡಿಕೆಶಿಗೆ ಚಾನ್ಸ್ ಸಿಗುತ್ತೆ. ಅದಕ್ಕೆ ಡಿಕೆಶಿ ಕೂಡಾ ಉಪ್ಪು ಖಾರ ಹಾಕ್ತಿದ್ದಾರೆ. ಇನ್ನೊಂದು ಕಡೆ ಜಮೀರ್ ಮುನಿಸಿಕೊಂಡು ಕಾಣದಂತೆ ಕೇರಳದಲ್ಲಿ ಮಾಯವಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಎರಡೂ ಚುನಾವಣೆಗಳನ್ನೂ ನಾವು ಸವಾಲಾಗಿ ಸ್ವೀಕರಿಸಿದ್ದೀವಿ. ಕಾಂಗ್ರೆಸ್ನಲ್ಲಿ ಒಡಕಿದೆ, ಅವ್ರು ಗೆಲ್ಲಲ್ಲ. ನಮಗೆ ಎರಡೂ ಕಡೆಯೂ ಗೆಲ್ಲುವ ವಿಶ್ವಾಸ ಇದೆ. ನಾಳೆಯಿಂದ ನಾನು ಎರಡೂ ಕಡೆಯೂ ಪ್ರಚಾರಕ್ಕೆ ಹೋಗ್ತೇನೆ. ಎರಡೂ ಕಡೆಯೂ ನಮಗೆ ಪೂರಕ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಿಂದಿ ಭಾಷೆ ವಿಚಾರವಾಗಿ ಮಾತನಾಡಿ, ಮೋದಿಯವರ ಮೇಲಿನ ಸಿಟ್ಟಿನಿಂದ ಹಿಂದಿ ಮೂರನೇ ಭಾಷೆ ತೆಗೆಯಲಾಗಿದೆ. ಈ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ವರ್ಷಪೂರ್ತಿ ಮಕ್ಕಳು ಹಿಂದಿ ವಿಷಯ ಓದಿದ್ದಾರೆ. ಏಕಾಏಕಿ ಈಗ ತುಘಲಕ್ ನಿರ್ಧಾರ ತಗೊಂಡಿದ್ದಾರೆ. ಕಾಂಗ್ರೆಸ್ನವರಿಗೆ ಮಾನ ಮರ್ಯಾದೆ ಏನಾದರೂ ಇದೆಯಾ? ಹಿಂದಿ ತೆಗೆಯೋದಿದ್ರೆ ಮೊದಲೇ ತೆಗಿಬೇಕಿತ್ತು. ಮಕ್ಕಳು ವರ್ಷಪೂರ್ತಿ ಓದಿದ ಮೇಲೆ ತೆಗೆಯೋದು ಸರಿಯಲ್ಲ. ಪರೀಕ್ಷೆ ಸಮಯದಲ್ಲಿ ಈ ರೀತಿ ನಿರ್ಧಾರ ಮಕ್ಕಳ ಮಾನಸಿಕತೆ ಮೇಲೆ ಪರಿಣಾಮ ಬೀರಬಹುದು. ಸರ್ಕಾರ ಮಕ್ಕಳ ವಿಚಾರದಲ್ಲಿ ಯಾಕೆ ರಾಜಕಾರಣ ಮಾಡ್ತಿದೆ ಎಂದು ಹೇಳಿದ್ದಾರೆ.
ನೆಹರೂ ಅವರು ತ್ರಿಭಾಷಾ ಸೂತ್ರ ತಂದಿದ್ದು, ಮೋದಿ ತಂದಿಲ್ಲ. ಇಂದಿರಾ ಗಾಂಧಿಯವರಂತೂ ಇನ್ನೂ ತೀವ್ರಗೊಳಿಸಿದರು. ನಮ್ಮ ಕನ್ನಡಿಗರು ಐಎಎಸ್ ಆಗಿ ಉತ್ತರ ಭಾರತದ ರಾಜ್ಯಕ್ಕೆ ಕೆಲಸಕ್ಕೆ ಹೋದಾಗ ಯಾವ ಭಾಷೆ ಮಾತಾಡಬೇಕು? ಇವೆಲ್ಲವನ್ನೂ ಪರಿಗಣಿಸಿಯೇ ತ್ರಿಭಾಷಾ ಸೂತ್ರ ಮಾಡಿದ್ದಾರೆ. ಕಾಂಗ್ರೆಸ್ನವ್ರಿಗೆ ಮೋದಿಯವರ ಮೇಲೆ ಸಿಟ್ಟು, ಮೋದಿ ಹಿಂದಿ ಕಡ್ಡಾಯ ಮಾಡಿದ್ರು ಅಂತ ಅನ್ಕೊಂಡಿದ್ದಾರೆ. ಕಾಂಗ್ರೆಸ್ನವ್ರದ್ದು ಹುಚ್ಚುತನ, ರಾಜಕಾರಣ. ಮುಸ್ಲಿಮರು ತಮಿಳುನಾಡಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂ ಭಾಷೆ ಕಡ್ಡಾಯ ಮಾತಾಡಲೇಬೇಕು. ಕರ್ನಾಟಕದಲ್ಲಿ ಯಾಕೆ ಮುಸ್ಲಿಮರು ಕನ್ನಡ ಕಡ್ಡಾಯ ಮಾತಾಡಲ್ಲ. ಇನ್ನೂ ನಮ್ಮಲ್ಲಿ ಮುಸ್ಲಿಮರು ನಮ್ದಿಕ್ಕೆ, ನಿಮ್ದಿಕ್ಕೆ ಅಂತ ಕನ್ನಡ ಮಾತಾಡ್ತಾರೆ. ಯಾಕೆ ಅವರ ವಿಚಾರದಲ್ಲಿ ಕಾಂಗ್ರೆಸ್ ಮೌನ, ಇದೇ ಓಲೈಕೆ ಅಂತ ವಾಗ್ದಾಳಿ ನಡೆಸಿದ್ದಾರೆ.



