ಕಲಬುರಗಿ:ಮುಖ್ಯಮಂತ್ರಿಗಳ ಬದಲಾವಣೆ ಪ್ರಸ್ತಾವನೆ ಹೈಕಮಾಂಡ್ ಮುಂದಿಲ್ಲ. ಒಂದು ವೇಳೆ ಬದಲಾವಣೆ ವಿಷಯ ಇದ್ದಿದ್ದರೆ ಶೇ. 60 ರಷ್ಟಾದರೂ ಗೊತ್ತಿರುತ್ತಿತ್ತು. ಮುಂಚೆ ತರಹ ಇಲ್ಲವಲ್ಲ, ಸಿಎಂ ಬದಲಾವಣೆ ವಿಷಯ ಕೇವಲ ಚರ್ಚೆಗೆ ಸೀಮಿತವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇ ಬೇರೆ ಮಾಧ್ಯಮಗಳು ಅರ್ಥ ಮಾಡಿಕೊಂಡಿದ್ದೇ ಬೇರೆ ಎಂದರು.
ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ. ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಯುತ್ತದೆ. ಆದರೆ, ಬಹಳ ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ನಮ್ಮ ಭಾಗದ ಜನರ ಆಶಯದಂತೆ ಚರ್ಚೆ ನಡೆಸಿ ಅಭಿವೃದ್ದಿಯ ನೀಲಿನಕ್ಷೆ ತಯಾರಿಸಲಾಗುವುದು ಎಂದು ವಿವರಣೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. “ಈ ನಿಟ್ಟಿನಲ್ಲಿ ಈಗಾಗಲೇ ಕೌಶಲ್ಯಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಂಟಿ ವತಿಯಿಂದ “ನಿಪುಣ – ಕರ್ನಾಟಕ” ಎನ್ನುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಇದ್ದು ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ” ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.
ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾಳೆ ಸಭೆ ನಡೆಸಲಾಗುವುದು. ಇದೇ ರೀತಿ ಸಚಿವರ ಸಭೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ ಎಂದರು.