ಮೈಸೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ‘ಬ್ರೇಕ್ ಫಾಸ್ಟ್ ಮೀಟಿಂಗ್’ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಭೆಗಳಿಗೆ ಬೇರೆ ಅರ್ಥ ಕಲ್ಪಿಸಬೇಡಿ, ಇದೊಂದು ಔತಣಕೂಟವಷ್ಟೇ, ಯಾವುದೇ ಗೊಂದಲ ಬೇಡ ಎಂದು ಅನುಮಾನಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್ಗಳಲ್ಲಿ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ. ಇದನ್ನು ಕೇವಲ ಪೊಲಿಟಿಕಲ್ ಬ್ರೇಕ್ ಫಾಸ್ಟ್ ಎಂದು ಕರೆಯುವುದು ಅಥವಾ ಭಾವಿಸುವುದು ಸರಿಯಲ್ಲ. ಈ ಸಭೆಗಳಿಗೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ ಆರೋಗ್ಯ ಸಚಿವ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಅದಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತವಿದೆ ಎಂಬ ವದಂತಿಗಳು ಸತ್ಯಕ್ಕೆ ದೂರವಾದದ್ದು, ನಮ್ಮಲ್ಲಿ ಯಾವುದೇ ಭಿನ್ನಮತಗಳಿಲ್ಲ. ಸುಮ್ಮನೆ ಹೊರಗಡೆ ಊಹಾಪೋಹಗಳು ಮತ್ತು ಚರ್ಚೆಗಳು ನಡೆಯುತ್ತಿವೆ ಅಷ್ಟೇ ಎಂದಿದ್ದಾರೆ. ಕೆಲವು ಸಮುದಾಯಗಳ ಶಾಸಕರು ತಮ್ಮ ನಾಯಕರ ಪರ ಧ್ವನಿ ಎತ್ತುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರವರ ವೈಯಕ್ತಿಕ ಸ್ವಾತಂತ್ರ್ಯ. ಅದನ್ನು ಹೊರತುಪಡಿಸಿ ಅಂತಿಮವಾಗಿ ಎಲ್ಲವನ್ನೂ ನಮ್ಮ ಪಕ್ಷದ ಹೈಕಮಾಂಡ್ ತಿರ್ಮಾನ ಮಾಡುತ್ತೆ. ಅವರ ನಿರ್ಧಾರಕ್ಕೆ ನಾವು ಬದ್ಧ. ಈಗಾಗಲೇ ಸಿಎಂ ಮತ್ತು ಡಿಸಿಎಂ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದು, ಅಲ್ಲಿಗೆ ಎಲ್ಲಾ ಗೊಂದಲಗಳು ಮತ್ತು ಚರ್ಚೆಗಳು ಮುಗಿದಿವೆ ಎಂದು ತಿಳಿಸಿದರು.
ಪಕ್ಷದ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಇಂತಹ ಬಹಿರಂಗ ಚರ್ಚೆಗಳು ನಡೆಯಬಾರದು. ಆದರೆ, ಈಗಾಗಲೇ ನಡೆದು ಹೋಗಿವೆ. ಈಗ ಎಲ್ಲವೂ ಬಗೆಹರಿದಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಒಟ್ಟಾಗಿ, ಒಂದಾಗಿಯೇ ಸರ್ಕಾರ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಯಾರಿಗೂ ಯಾವ ಅನುಮಾನವೂ ಬೇಡ ಎಂದು ದಿನೇಶ್ ಗುಂಡೂರಾವ್ ಅವರು ಊಹಾಪೋಹಾಗಳಿಗೆ ಬ್ರೇಕ್ ಹಾಕಿದ್ದಾರೆ.
ಕುಮಾರ್ ಸ್ವಾಮಿ ಆವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬಳಿ ದಾಖಲೆ ಇದೆ ಎಂದು ಹೇಳುತ್ತಾರೆಯೇ ವಿನಾ ಒಮ್ಮೆಯೂ ಅವುಗಳನ್ನು ಬಿಚ್ಚಿಲ್ಲ, ನೀಡಿಲ್ಲ. ಹೀಗಾಗಿ, ಅವರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲಾಖೆವಾರು ಅನುದಾನ ಹಂಚಿಕೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಪೂರ್ತಿ ಮಾಹಿತಿ ಇಟ್ಟುಕೊಳ್ಳುವುದಿಲ್ಲ, ದಾಖಲೆ ತೋರಸ್ತಿನಿ ಅಂತಾರಷ್ಟೆ ಸರಕಾರ ಸುಭದ್ರವಾಗಿದೆ. ಯಾವುದೇ ತೊಂದರೆಗಳಿಲ್ಲ. ಇದುವರೆಗೆ ಉತ್ತಮ ಆಡಳಿತ ನೀಡಿದ್ದು, ಮುಂದೆಯೂ ಅದನ್ನೇ ಮಾಡುವೆವು. ಯಾರು ಸಿಎಂ ಆಗಬೇಕೆಂಬ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು ಎಂದು ತಿಳಿಸಿದರು.



