ಬೆಂಗಳೂರು : ಹರಾಜು ಮೂಲಕ ಗಣಿ ಪ್ರದೇಶಗಳನ್ನು ಪಡೆದುಕೊಂಡ ಬಳಿಕ ನಿಗದಿತ ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸುವ ಕುರಿತು ಸ್ಪಷ್ಟ ನಿಯಮ ರೂಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ಗಣಿ ನೀತಿಯ ಜೊತೆಗೆ ಇತರ ರಾಜ್ಯಗಳ ಗಣಿ ನೀತಿ, ನಿಯಮಗಳು ಹಾಗೂ ಕಾನೂನುಗಳ ಸಮಗ್ರ ಅಧ್ಯಯನ ನಡೆಸಿ ಸೂಕ್ತ ನಿಯಮಾವಳಿ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಹರಾಜು ಮೂಲಕ ಗಣಿ ಪ್ರದೇಶಗಳನ್ನು ಪಡೆದು ವರ್ಷಗಳಾದರೂ ಗಣಿಗಾರಿಕೆ ಆರಂಭಿಸದವರ ವಿರುದ್ಧ ಇದುವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಅವರು, ಗಣಿ ಪ್ರದೇಶ ಪಡೆದಿರುವವರ ಸಂಖ್ಯೆ, ಅವರ ಪ್ರಸ್ತುತ ಸ್ಥಿತಿ, ಇನ್ನೂ ಕಾರ್ಯಾರಂಭ ಮಾಡದವರ ಪಟ್ಟಿ, ವಿಳಂಬಕ್ಕೆ ಕಾರಣಗಳು ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಬಾಕಿ ಇರುವ ಪ್ರಕರಣಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಇಲಾಖೆಯ ಆದಾಯ ಸಂಗ್ರಹದ ಪ್ರಗತಿಯನ್ನೂ ಪರಿಶೀಲಿಸಲಾಯಿತು. 2025-26ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಆದಾಯ ಗುರಿಯ ಶೇ.98ರಷ್ಟು ಸಾಧನೆಯಾಗಿದ್ದು, ಒಟ್ಟು 8,845.39 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ. 2026-27ನೇ ಸಾಲಿನಲ್ಲಿ ಇದುವರೆಗೆ 1,164.11 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅದೇ ವೇಳೆ, 2025-26ನೇ ಸಾಲಿನಲ್ಲಿ ಅಕ್ರಮ ಹಾಗೂ ಅನಧಿಕೃತ ಗಣಿಗಾರಿಕೆಗೆ ಸಂಬಂಧಿಸಿದ 6,301 ಪ್ರಕರಣಗಳು ಪತ್ತೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ 31.26 ಕೋಟಿ ರೂ. ದಂಡ ವಸೂಲಿ ಮಾಡಲಾಗಿದ್ದು, 268 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.



