ಬೆಂಗಳೂರು: ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಸರ್ಕಾರಿ ಗ್ರೂಪ್ ಎ, ಬಿ ಹುದ್ದೆಗಳ ನೇಮಕಾತಿ ಸಂಬಂಧ 12 ಮಂದಿ ವಿಜೇತರಿಗೆ ಸಿಎಂ ಸಿದ್ದರಾಮಯ್ಯ ನೇಮಕಾತಿ ಪತ್ರ ವಿತರಣೆ ಮಾಡಿದ್ದಾರೆ.
ಹೆಚ್.ಎನ್ ಗಿರೀಶ್, ಟಿ.ಎಸ್ ದಿವ್ಯಾ, ಎನ್.ಉಷಾರಾಣಿ, ಸುಷ್ಮಿತಾ ಪವಾರ್, ನಿಕ್ಕಿನ್ ತಿಮ್ಮಯ್ಯ, ಎಸ್.ವಿ ಸುನೀಲ್, ಮಲಪ್ರಭಾ ಯಲ್ಲಪ್ಪ, ಗುರುರಾಜ, ಎಂ.ಎಸ್ ಶರತ್, ವಿ.ರಾಧಾ, ರಾಘವೇಂದ್ರ, ಕಿಶನ್ ಗಂಗೊಳ್ಳಿ ಅವರಿಗೆ ನೇಮಕಾತಿ ಪತ್ರವನ್ನು ಸಿಎಂ ವಿತರಿಸಿದ್ದಾರೆ.
ನೇಮಕಾತಿ ಪತ್ರ ವಿತರಣೆ ಬಳಿಕ ಮಾತನಾಡಿದ ಸಿಎಂ, ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ , ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ , ಕಾಮನ್‍ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಪಡೆದ 12 ಜನರಿಗೆ ಅವಕಾಶ ಪತ್ರ ನೀಡಿ ನೇರ ನೇಮಕಾತಿ ಮಾಡುತ್ತಿದ್ದೇವೆ. 2016-17 ರಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಘೋಷಣೆ ಮಾಡಲಾಗಿತ್ತು. ಪದಕ ಪಡೆದವರಿಗೆ ಆದ್ಯತೆ ಮೇರೆಗೆ ಕೆಲಸ ನೀಡುವ ಘೋಷಣೆ ಮಾಡಿದ್ದೆ. ನಂತರ ಬಂದ ಸರ್ಕಾರ ಇದನ್ನು ಮಾಡಲಿಲ್ಲ. ಈಗ ನಾನು ಅಧಿಕಾರಕ್ಕೆ ಬಂದಿದ್ದೇನೆ. ಈಗ ನೇಮಕ ಮಾಡಿಕೊಳ್ಳುತ್ತೇವೆ. ಪದವಿ ಪಡೆದು ಪದಕ ಪಡೆದವರಿಗೆ ಕ್ಲಾಸ್ 1, ಕ್ಲಾಸ್ 2 ಹುದ್ದೆ ಕೊಡುತ್ತಿದ್ದೇವೆ. ಒಬ್ಬರಿಗೆ ಕ್ಲಾಸ್ 1 ಉಳಿದ 11 ಮಂದಿಗೆ ಕ್ಲಾಸ್ 2 ಉದ್ಯೋಗ ಕೊಡ್ತಿದ್ದೇವೆ. ಸಮಿತಿಯ ಶಿಫಾರಸ್ಸಿನ ಮೇರೆಗೆ ನೇಮಕಾತಿ ಪತ್ರ ಕೊಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ವಯಸ್ಸಿನ ಮಿತಿಯ ವಿನಾಯಿತಿ ನೀಡಿ, 45 ವರ್ಷದವರಿಗೂ ಅವಕಾಶ ನೀಡ್ತಿದ್ದೇವೆ. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ನೀವೆಲ್ಲ ನಮ್ಮ ರಾಷ್ಟ್ರಕ್ಕೆ ಗೌರವ ಕೊಟ್ಟಿದ್ದೀರಿ ಎಂದು ಪದಕ ಪಡೆದ ಕ್ರೀಡಾಪಟುಗಳನ್ನು ಅವರು ಅಭಿನಂದಿಸಿದ್ದಾರೆ.