ಬೆಂಗಳೂರು: ನಮ್ಮ ಮುಖ್ಯಮಂತ್ರಿಗಳು ಹೇಳಿದ ಮೇಲೆ ಅವರು ಹೇಳಿದ್ದೇ ಫೈನಲ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಪಕ್ಷಕ್ಕೆ ವಿಧೇಯನಾಗಿದ್ದೇನೆ. ಸಿಎಂ ಹೇಳಿದ ಮೇಲೆ ಯಾವುದೇ ತಕರಾರೇ ಇಲ್ಲ. ನೋ ಕ್ವೆಶ್ಚನ್, ಡಿಬೇಟ್, ಅದಕ್ಕೆಲ್ಲಾ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿ ಡಿಕೆಶಿ ನಕ್ಕಿದ್ದಾರೆ.
ಲೋಕಾಯುಕ್ತಕ್ಕೆ ಜಾರಿ ನಿರ್ದೇಶನಾಲಯ ಪತ್ರ ಬರೆದ ವಿಚಾರಕ್ಕೆ ಸಂಬಧಿಸಿದಂತೆ ಕೇಳಿದ ಪ್ರಶ್ನೆಗೆ, ಯಾವುದೇ ವಿಚಾರಣೆ ಗುಪ್ತವಾಗಿ ನಡೆಯುವಂತದ್ದು. ಏನಾದ್ರೂ ಇದ್ದರೆ ಕೋರ್ಟ್‌ಗೆ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಸಲ್ಲಿಸದೇ ಮಾಧ್ಯಮಕ್ಕೆ ಬಿಡುಗಡೆ ಮಾಡುತ್ತೇವೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಎಷ್ಟು ಡಿಪ್ರೆಷನ್, ಡಿಸ್ಟರ್ಬ್ ಆಗಿದ್ದಾರೆ ಅಂತ ಇದರಲ್ಲೇ ಅರ್ಥ ಆಗುತ್ತೆ. ಏನೂ ಇಲ್ಲ ಎನ್ನುವುದು ಅರ್ಥ ಆಗುತ್ತಿದೆ. ಆದರೂ ಚಿಂತೆ ಇಲ್ಲ ನಮ್ಮ ಹೋರಾಟ ಮುಂದುವರೆಯುತ್ತದೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.