ಬೆಂಗಳೂರು: ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಅವರ ನಿಧನದಿಂದ ಸಂಕಷ್ಟದಲ್ಲಿರುವ ಅವರ ಕುಟುಂಬಕ್ಕೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ )ದ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.
ಜ್ಞಾನ ದೀಪ, ಜನಮಿತ್ರ, ಹಾಸನಮಿತ್ರ, ನಾಡಸಹ್ಯಾದ್ರಿ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ
ಹೇಮಕುಮಾರ್ ಅವರಿಗೆ ಪತ್ನಿ ಮತ್ತು ಮಗಳಿದ್ದಾರೆ. ಅಪ್ಪನ ಸಾವಿನ ಬಳಿಕ ಕುಟುಂಬ ನಿರ್ವಹಣೆಗಾಗಿ ಅದೇ ವೃತ್ತಿಯನ್ನು (ಪತ್ರಿಕೆ ಹಾಕುವುದು ಸೇರಿ) ಪುತ್ರಿ ವಿದ್ಯಾ ಮುಂದುವರಿಸಿದ್ದಾರೆ. ಕುಟುಂಬ ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ತಂದಿದ್ದ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪರಿಹಾರ ಕೋರಿದ್ದರು.
ಕೆಯುಡಬ್ಲೂಜೆ ಸಲ್ಲಿಸಿದ ಕೋರಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ಪರಿಹಾರ ಮಂಜೂರು ಮಾಡಿದ್ದಾರೆ.
ಪರಿಹಾರ ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಕೃತಜ್ಞತೆ ಸಲ್ಲಿಸಿದೆ.