ರಾಯಚೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಬಹಿರಂಗ ಪ್ರಚಾರ ನಡೆಸಿ ಶಕ್ತಿ ಪ್ರದರ್ಶನ ಮಾಡಲು ಕಾಂಗ್ರೆಸ್ ಪಕ್ಷ ಸಕಲ ಸಿದ್ಧತೆ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಅನೇಕ ಸಚಿವರು ನಾಳೆ ಏ.೨೮ ರಂದು ಸಿಂಧನೂರಿಗೆ ಭೇಟಿ ನೀಡಲಿದ್ದಾರೆ.
ಸಿಂಧನೂರು, ಸಿರಗುಪ್ಪ ಮತ್ತು ಮಸ್ಕಿ ಈ ಮೂರು ತಾಲ್ಲೂಕುಗಳನ್ನು ಒಳಗೊಂಡು ಬಹಿರಂಗ ಸಭೆಯನ್ನು ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸುಮಾರು ೧೦ ಸಾವಿರಕ್ಕೂ ಅಧಿಕ ಕುರ್ಚಿಗಳು, ೩೦ ಸಾವಿರ ಲೀಟರ್ ತಂಪು ಕುಡಿಯುವ ನೀರಿನ ೬ ಟ್ಯಾಂಕರ್‍ಗಳು, ೨೫ ಸಾವಿರ ಕುಡಿಯುವ ನೀರಿನ ಪ್ಯಾಕೇಟ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ಫಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅದರಂತೆ ಕಳೆದೊಂದು ವಾರದಿಂದ ನಗರದ ವಿವಿಧ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಸುಮಾರು ೨೫ ಸಾವಿರ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿದ್ದಾರೆ. ಪ್ರತಿ ವಾರ್ಡ್‌ನಿಂದ ಕನಿಷ್ಠ ೨೦೦ ಜನರನ್ನು ಸಭೆಗೆ ಕರೆದುಕೊಂಡು ಬರುವಂತೆ ಶಾಸಕ ಹಂಪನಗೌಡ ಬಾದರ್ಲಿ ಮುಖಂಡರಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಮೂರು ತಾಲ್ಲೂಕುಗಳ ಹಳ್ಳಿ ಮತ್ತು ಕ್ಯಾಂಪ್‌ಗಳಿಂದ ನೂರಾರು ಟ್ರ್ಯಾಕ್ಟರ್, ಕ್ರೂಷರ್, ಕಾರು, ಬೈಕ್‌ಗಳ ಮೂಲಕ ಜನರು ಸಭೆಗೆ ಬರಲಿದ್ದಾರೆ.