ಬೆಂಗಳೂರು : ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸೆಪ್ಟಂಬರ್ ೧೫ ರಂದು ವಿಧಾನಸೌಧದ ಮುಂಭಾಗ ಚಾಲನೆ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಹಾಗಾಗಿ, ಸೆ. ೧೫ ರಂದು ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಇದು ಉಪಯೋಗವಾಗಲಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಿಕೆ, ಮಕ್ಕಳಲ್ಲಿ ಸಂವಿಧಾನದ ಉದ್ದೇಶ ಅರ್ಥ ಆಗಬೇಕು. ಹಾಗಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದರು. ಮೂಲಭೂತ ಹಕ್ಕುಗಳು ಎಲ್ಲರಿಗೂ ಗೊತ್ತಿದೆ. ಆದರೆ ಕರ್ತವ್ಯಗಳನ್ನು ಯಾರು ಪಾಲಿಸುತ್ತಿಲ್ಲ. ಹಾಗಾಗಿಯೇ ಈ ಕಾರ್ಯಕ್ರಮ ತಂದಿದ್ದೇವೆ. ಆನ್‌ಲೈನ್ ಮೂಲಕ ರಿಜಿಸ್ಟ್ರೇಷನ್ ಆಗಿದೆ. ಸುಮಾರು ಎರಡು ಕೋಟಿ ಜನ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದು ಒಂದು ದೊಡ್ಡ ಆಂದೋಲನವಾಗಬೇಕು. ಎಲ್ಲ ಕಡೆಯೂ ಇದನ್ನು ಬಳಸಬೇಕು ಎಂದು ಹೇಳಿದರು.
ಸಂವಿಧಾನ ಪೀಠಿಕೆಯನ್ನು ಸುಮ್ಮನೆ ಆರ್ಡರ್ ಮಾಡಲ್ಲ. ಇದನ್ನು ಮ್ಯಾಂಡೇಟ್ ಮಾಡ್ತೇವೆ. ಕಡ್ಡಾಯವಾಗಿ ಇದನ್ನು ಓದುವಂತೆ ಮಾಡ್ತೇವೆ. ಕೇವಲ ಶಾಲಾ ಕಾಲೇಜ್‌ಗೆ ಮಾತ್ರ ಅನ್ವಯ ಅಲ್ಲ, ಸರ್ಕಾರಿ ಕಚೇರಿಗಳಲ್ಲೂ ಇದು ಅನ್ವಯ. ಸಿಎಂ ಕಚೇರಿಯಲ್ಲೂ ಇದನ್ನು ಓದಬೇಕು. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಲ್ಲೂ ಸಂವಿಧಾನ ಪೀಠಿಕೆಯನ್ನು ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.
ಶಿಕ್ಷಣದ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯ. ಆದ್ದರಿಂದಲೇ ನಾವು ಇಂದು ಚಂದ್ರನನ್ನು ಕೂಡಾ ಮುಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದ್ದರು.