ಮೈಸೂರು: ನರೇಂದ್ರ ಮೋದಿ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರೆಸಿದ್ದಾರೆ. ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯ, ದೂರದೃಷ್ಟಿ ಇಲ್ಲದ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಪೂರ್ವಭಾವಿ ಚರ್ಚೆಗೆ ನನ್ನನ್ನು ಕರೆದಿದ್ದರು. ಕೃಷ್ಣಬೈರೇಗೌಡರನ್ನು ಕಳುಹಿಸಿದ್ದೆ. ಈ ಬಜೆಟ್ ನಲ್ಲಿ ಅನೇಕ ಬೇಡಿಕೆ ಇಟ್ಟಿದ್ದೆವು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಇದ್ದಾವೇ ಹೊರತು ಒಂದನ್ನೂ ಈಡೇರಿಸಿಲ್ಲ ಎಂದು ಅಸಮಾಧಾನ ತೋರ್ಪಡಿಸಿದರು.
ಈ ವರ್ಷ 50 ಲಕ್ಷದ 65 ಸಾವಿರದ 345 ಕೋಟಿ ಬಜೆಟ್. ಕಳೆದ ವರ್ಷ 48 ಲಕ್ಷದ 20 ಸಾವಿರ ಕೋಟಿ. ಈ ಬಾರಿ ಒಂದು ಲಕ್ಷದ 4 ಸಾವಿರ ಕೋಟಿ ಕಡಿಮೆ ಬಜೆಟ್ ಮಂಡಿಸಿದ್ದಾರೆ. ತೆರಿಗೆ ಸಂಗ್ರಹ ಅಂದಾಜಿನಷ್ಟು ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಈ ಬಜೆಟ್ ಗಾತ್ರದಲ್ಲಿ ಕೇಂದ್ರ ಸಾಲ ತಗೊಂಡಿರುವುದು 15 ಲಕ್ಷದ 68 ಸಾವಿರದ 936 ಕೋಟಿ. 12 ಲಕ್ಷದ 70 ಸಾವಿರ ಕೋಟಿ ಬಡ್ಡಿ ಪಾವತಿಗೆ ಕೊಟ್ಟಿದ್ದಾರೆ. ದೇಶದ ಮೇಲೆ ಸಾಲ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿಯಾಗಿದೆ ಎಂದರು.
ಮೇಕೆದಾಟು, ಅಪ್ಪರ್ ಭದ್ರಾ ಸೇರಿದಂತೆ ಹಲವು ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಅಪ್ಪರ್ ಭದ್ರಾಗೆ 5,300 ಕೋಟಿ ಕೊಡುತ್ತೇವೆಂದು ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಲ್ಲಿಯವರೆಗೆ ಒಂದು ರೂಪಾಯಿ ಬಂದಿಲ್ಲ. ಈ ಬಜೆಟ್ ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುವಾಗ ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟೀಯ ಯೋಜನೆ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಒಣ ಭೂಮಿ ಹೆಚ್ಚಿದೆ. ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲ, ನೀರಾವರಿ ಯೋಜನೆಗಳ ಪ್ರಸ್ತಾವನೆ ಇಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡುತ್ತಾರೆ ಅಂದುಕೊಂಡಿದ್ದೆ. ಕೇಂದ್ರ ಸಚಿವರು ಭರವಸೆ ಕೊಟ್ಟಿದ್ದರು ಆ ಪ್ರಸ್ತಾವನೆ ಕೂಡ ಇಲ್ಲ ಎಂದರು.
ರಾಜ್ಯದ ನಗರಗಳ ಕುಡಿಯವ ನೀರಿನ ಯೋಜನೆ, ಗ್ರಾಮೀಣ ಪ್ರದೇಶಗಳಿಗೆ, ರೈಲೆ ಹೆದ್ದಾರಿಗೆ ಹಣ ಒದಗಿಸಲು ಕೇಳಿದ್ದೇವು. ಅದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳಿಗೆ, ರಾಜಕಾಲುವೆ ನಿರ್ಮಾಣ, ಬ್ಯುಸಿನೆಸ್ ಕಾರಿಡಾರ್ ಮಾಡಲು ಹಣ ಕೇಳಿದ್ದೆವು. ಅವರು ಕೊಟ್ಟಿರುವುದು ಕಾಲಿ ಚೊಂಬು. ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಕೇಳಿದ್ದೆವು, ಅದಕ್ಕೂ ಒಂದು ರೂಪಾಯಿ ಕೊಟ್ಟಿಲ್ಲ. ವಸತಿ ಯೋಜನೆಗಳಿಗೆ ಕೇಂದ್ರ ಒಂದು ಲಕ್ಷ ಕೊಡುತ್ತಿದ್ದಾರೆ. 5 ಲಕ್ಷಕ್ಕೆ ಹೆಚ್ಚಿಸಲು ಕೇಳಿದ್ದೆವು, ಅದನ್ನೂ ಮಾಡಿಲ್ಲ. ಗ್ರಾಮೀಣ ಭಾಗದಲ್ಲಿ 72 ಸಾವಿರ ಕೊಡ್ತಾರೆ 3 ಲಕ್ಷದ ಏರಿಕೆಗೆ ಕೇಳಿದ್ದೆವು ಅದನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬಿಹಾರ್ ಚುನಾವಣೆ ಬರುತ್ತಿದೆ. ಹೀಗಾಗಿ ಚುನಾವಣೆಗೋಸ್ಕರ ಮೂರ್ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದಾರೆ. ನಮಗೆ ಬಜೆಟ್ ನಲ್ಲಿ ಚೊಂಬು ಕೊಟ್ಟ ಹಾಗೆ ಬಿಹಾರಕ್ಕೂ ಮಾಡುತ್ತಾರೆ ಎಂದರು.
ಬಡವರಿಗೆ, ಕಾರ್ಮಿಕರಿಗೆ, ಯುವಕರಿಗೆ, ಮಹಿಳೆಯರಿಗೆ ಖರ್ಚು ಮಾಡುವ ಬದಲು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎಂ ಎಸ್ ಎಂ ಇ ತೆರಿಗೆ ಕಡಿತದ ಭರವಸೆ ನೀಡಿದ್ದರು. ಆದರೆ ಈ ವಲಯಕ್ಕೆ ಕೊಡುವ ಅನುದಾನವನ್ನು ಕಡಿಮೆ ಮಾಡಿದ್ದಾರೆ. ಇದು ಕರ್ನಾಟಕಕ್ಕೆ ಅನ್ಯಾಯ ಮಾಡಿರುವ ಬಜೆಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.