Tuesday, June 17, 2025
Google search engine

Homeರಾಜಕೀಯರಾಜೀನಾಮೆ ಕೇಳಿದ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ರಾಜೀನಾಮೆ ಕೇಳಿದ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ದುರಂತದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್‌ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿರುವ ಅವರು, “ಹೆಣಗಳ ಮೇಲಿನ ರಾಜಕೀಯ ಬಿಜೆಪಿ ಪಾಲಿಗೆ ಹೊಸದೇನಲ್ಲ” ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಈ ಅಪಘಾತದ ಹೊಣೆಯನ್ನು ತನ್ನ ಸರ್ಕಾರ ಹೊತ್ತಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾಯಿಸಲಾಗಿದ್ದು, ತಮ್ಮ ರಾಜಕೀಯ ಕಾರ್ಯದರ್ಶಿಯನ್ನೂ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನೂ ರಚಿಸಲಾಗಿದೆ.

“ಇಷ್ಟೊಂದು ಕ್ರಮಗಳನ್ನು ಕೈಗೊಂಡ ಬಳಿಕವೂ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆ ಜನಪರ ಕಾಳಜಿಯಿಂದಲ್ಲ, ಶುದ್ಧ ರಾಜಕೀಯ ಲಾಭಕ್ಕಾಗಿ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಪಕ್ಷದ ವಿರುದ್ಧವೂ ಕಿಡಿಕಾರಿದ್ದು, “ಸತ್ತವರ ಹೆಣಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಪದ್ಧತಿಯೇ ಆಗಿದೆ” ಎಂದು ಟೀಕಿಸಿದರು.

ಸಿಎಂ ಅವರು ಬಿಜೆಪಿ ನಾಯಕರ ನೈತಿಕತೆ ಪ್ರಶ್ನೆ ಮಾಡುತ್ತಾ ಹಲವು ಗಂಭೀರ ಪ್ರಕರಣಗಳನ್ನು ಉಲ್ಲೇಖಿಸಿದರು. 2002ರ ಗುಜರಾತ್ ಗಲಭೆಯಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡರು. ಆ ಘಟನೆಯ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಅವರದ್ದೇ ಪಕ್ಷದ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಸೂಚನೆ ನೀಡಿದರೂ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ರಾಜೀನಾಮೆ ನೀಡಲಿಲ್ಲ. ನಮ್ಮ ರಾಜೀನಾಮೆ ಕೇಳುವವರು ಮೊದಲು ಇದಕ್ಕೆ ಉತ್ತರಿಸಿ.

ಇದೇ ರೀತಿಯಾಗಿ, 2024ರಲ್ಲಿ ಪಹಲ್ಗಾಮ್‌ನಲ್ಲಿ ಉಗ್ರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡರೂ ಪ್ರಧಾನಿ ರಾಜೀನಾಮೆ ನೀಡಲಿಲ್ಲ.

ಈಶಾನ್ಯ ಭಾಗದ ಮಣಿಪುರ ಹಿಂಸೆಯ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಹೀಗಿದ್ದರೂ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ 20 ತಿಂಗಳ ಕಾಲ ಕುರ್ಚಿಗೆ ಅಂಟಿಕೂತಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ರಾಜೀನಾಮೆ ನೀಡಿದ್ದರು. ಈಗಲೂ ಅಲ್ಲಿ ಹಿಂಸಾಚಾರ ಮುಂದುವರಿದಿದೆ.

ಗುಜರಾತ್ ನ ಮೋರ್ಬಿ ಸೇತುವೆ ಕುಸಿದು ಬಿದ್ದು 140 ಮಂದಿ ಮೃತಪಟ್ಟಿದ್ದರು. ಮಹಾಕುಂಭಮೇಳದದಲ್ಲಿ 30 ಯಾತ್ರಿಕರು ಪ್ರಾಣ ಕಳೆದುಕೊಂಡರು. ಆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವವರು ಬಿಜೆಪಿಗೆ ಸೇರಿದವರಲ್ಲವೇ? ಇವರು ರಾಜೀನಾಮೆ ನೀಡುವುದು ಬಿಡಿ, ಆ ಘಟನೆಗಳ ಬಗ್ಗೆ ಇಲ್ಲಿಯ ವರೆಗೆ ಸರಿಯಾದ ತನಿಖೆಯನ್ನೇ ಅಲ್ಲಿನ ಸರ್ಕಾರ ನಡೆಸಿಲ್ಲ. ಇವೆಲ್ಲ ದುರಂತಕ್ಕೂ ರಾಜೀನಾಮೆ ನೀಡದ ಬಿಜೆಪಿ ನಾಯಕರಿಗೆ ಈಗ ರಾಜ್ಯದ ಘಟನೆಯ ಬಗ್ಗೆ ನೈತಿಕತೆ ಬೋಧಿಸುವ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ 7 ಕೋಟಿಗೂ ಹೆಚ್ಚು ಜನರ ಪ್ರತಿನಿಧಿಯಾಗಿದ್ದು, ಕರ್ತವ್ಯಕ್ಕೆ ದ್ರೋಹ ಮಾಡಿದವರ ಮೇಲೆ ಕ್ರಮಕೈಗೊಳ್ಳುವುದು ತನ್ನ ಹೊಣೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ತನಿಖಾ ಆಯೋಗದ ವರದಿಯ ಮೇಲೆ ಆಧಾರಿತವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಬಿಜೆಪಿ ನಾಯಕರು “ಬೀದಿನಾಟಕ” ಬಿಟ್ಟುಕೊಟ್ಟು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು” ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular