ಕಲಬುರಗಿ: ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಬಿಟ್ಟು ಹೋಗಿರುವ ಅರ್ಹರ ಹೆಸರುಗಳನ್ನ ಹೊಸದಾಗಿ ಸೇರಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕಲಬುರಗಿಯಲ್ಲಿ ಈ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್‌ಗೆ ಯಾರೆಲ್ಲಾ ಅರ್ಹರು ಇದ್ದರೋ ಅವರನ್ನ ತೆಗೆಯುವುದಿಲ್ಲ. ಆದರೆ ಅನರ್ಹರು ಯಾರೆಲ್ಲ ಇದ್ದಾರೆ ಅವರನ್ನು ಬಿಪಿಎಲ್ ಕಾರ್ಡ್‌ನಿಂದ ತೆಗದು ಹಾಕಲು ನಾನು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಯಾರಾದರೂ ಅರ್ಹರ ಹೆಸರು ಬಿಪಿಎಲ್ ಕಾರ್ಡ್‌ನಿಂದ ಬಿಟ್ಟು ಹೋಗಿದ್ದರೆ, ಅವರನ್ನ ಹೊಸದಾಗಿ ಸೇರಿಸಲು ಸಹ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ, ಅನೇಕ ಕಡೆ ಕ್ರಿಶ್ಚಿಯನ್ ಧರ್ಮದ ಹಿಂದೆ ಹಿಂದೂ ಜಾತಿಗಳನ್ನ ಸೇರಿಸಿರುವ ವಿಚಾರವಾಗಿ ಸಹ ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾವ ಮಾಹಿತಿ ಕೊಡುತ್ತಾರೋ ಅದನ್ನೆ ಬರೆದುಕೊಳ್ಳಲಾಗುತ್ತದೆ. ಅವರು ಹೇಳಿದ್ದನ್ನ ಮಾತ್ರ ಬರೆಯಲು ಸಾಧ್ಯ. ಯಾಕೆ ಕ್ರಿಶ್ಚಿಯನ್ನರು, ಮುಸ್ಲಿಮರು ಈ ದೇಶದ ನಾಗರಿಕರಲ್ವ? ಎಂದು ಪ್ರಶ್ನೆ ಮಾಡಿದ್ದಾರೆ, ಅಲ್ಲದೇ, ಈ ವಿಚಾರವಾಗಿ ಬಿಜೆಪಿಯವರಿಗೆ ಸಮಸ್ಯೆ ಇದ್ದರೆ ರಾಜ್ಯಪಾಲರಿಗೆ ದೂರು ಕೊಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಜಾತಿ ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ಸೇರಿಸಿರುವ ವಿಚಾರದ ಬಗ್ಗೆ ಬಿಜೆಪಿ ಅವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸಹ ಅವರು ಮಾತನಾಡಿದ್ದು, ಆರ್.ಅಶೋಕ್ ಅವರು ಹೇಳಿದ ಹಾಗೆ ನಾವು ಕೇಳೋಕೆ ಆಗುವುದಿಲ್ಲ. ಈ ಬಿಜೆಪಿ ಅವರು ನಾವು ಏನು ಮಾಡಿದರೂ ಅದಕ್ಕೆ ಒಂದು ಮಾತನಾಡುತ್ತಾರೆ. ಸದ್ಯಕ್ಕೆ ನಾವು ನಾವು ಸೋಶಿಯೋ ಎಜುಕೇಷನ್ ಸರ್ವೇ ಮಾಡುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ‍್ಯ ಬಂದು 78 ವರ್ಷ ಆಗಿದೆ, ಜನರ ಆರ್ಥಿಕ ಶೈಕ್ಷಣಿಕ ಪರಿಸ್ಥಿತಿ ಏನಿದೆ ಹಾಗೂ ಹೇಗಿದೆ ಎಂಬುದನ್ನ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದಿದ್ದಾರೆ.
ಇನ್ನು ಡಿಸೆಂಬರ್ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳಲಿದೆ. 1.75 ಲಕ್ ಮಂದಿ ಶಿಕ್ಷಕರನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಸಮೀಕ್ಷೆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಆಯೋಗದ ಸಹಾಯವಾಣಿ 8050770004 ನ್ನು ಸಂಪರ್ಕಿಸಿ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ ಆಯೋಗದ ವೆಬ್ ಸೈಟ್ ವಿಳಾಸ www.ksdckarnatakagovt.in ಮೂಲಕವೂ ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.