ಬೆಂಗಳೂರು : ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯನ್ನು ನಡೆಸಲಾಗಿದ್ದು,. ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ 2020ರಲ್ಲಿ ಶೇ.10 ರಷ್ಟಿದ್ದುದು, ಪ್ರಸ್ತುತ ಶೇ. 7ಕ್ಕೆ ಇಳಿದಿದೆ. ಶಿಕ್ಷೆಯ ಪ್ರಮಾಣವನ್ನು ಶೇ.10 ಕ್ಕೆ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರಿ ಪ್ರಾಸಿಕ್ಯೂಟರ್ ಗಳು ಹಾಗೂ ಪೊಲೀಸ್ ಇಲಾಖೆಯವರು ಪರಿಶೀಲನಾ ಸಭೆ ನಡೆಸಬೇಕು. ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ತಪ್ಪದೇ ಪ್ರಗತಿ ಪರಿಶೀಲನಾ ಸಭೆ ನಡೆಸಲು, ಈ ಬಗ್ಗೆ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.
ಬ್ಯಾಕ್ ಲಾಗ್ ಹಾಗೂ ಬಡ್ತಿ ವಿಚಾರದಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸಭೆಯಲ್ಲಿ ಸಮಿತಿ ಸದಸ್ಯರು ಚರ್ಚಿಸಿದ್ದು, ಬ್ಯಾಕ್ ಲಾಗ್ ಹಾಗೂ ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪರಿಶೀಲನಾ ಸಭೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.