Saturday, April 19, 2025
Google search engine

Homeರಾಜ್ಯಚಾಂಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ಧರಾಮಯ್ಯ ಸೂಚನೆ

ಚಾಂಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ಧರಾಮಯ್ಯ ಸೂಚನೆ

ಬೆಂಗಳೂರು: ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. ಶಾಸಕ ದಿನೇಶ್ ಗೂಳಿಗೌಡ ಅವರ ಮನವಿ ಮೇಲೆ ಈ ಆದೇಶ ಮಾಡಲಾಗಿದೆ.

ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬ ಭಕ್ತರ, ಬೇಡಿಕೆಯನ್ನು ಅರಿತು, ಸಂಕಲ್ಪ ಮಾಡಿಕೊಂಡು ಪ್ರಯತ್ನಿಸಲಾಗಿತ್ತು. ಸಿಎಂ ಆದೇಶದಿಂದ ಈಗ ಆ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತಾಗಿದೆ.

ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆಯಾಗಿದ್ದಾಳೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿಯಾಗಿದ್ದಾಳೆ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತ ಕೋಟಿಯ ಬೇಡಿಕೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ಬೇಡಿಕೆ ಸಲ್ಲಿಸಿ, ಕೆಲವು ಸಲಹೆ ನೀಡಿದ್ದೆ. ಚಿನ್ನದ ರಥ ನಿರ್ಮಿಸುವ ವೆಚ್ಚವನ್ನು ಸರ್ಕಾರಪಾಲು .ಮತ್ತು ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ನೀಡಿದ್ದೆ. ಅದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.

ಪುರಾಣದ ‘ದೇವಿ ಮಹಾತ್ಮೆ’ಯಲ್ಲಿ ತಾಯಿ ಚಾಮುಂಡಿಯ ಪ್ರಸ್ತಾಪವಿದೆ. ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟವೆಂಬ ಹೆಸರು ಬಂದಿದೆ. ಸ್ಕಂದ ಪುರಾಣದಲ್ಲಿ ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರ ಉಲ್ಲೇಖಿತವಾಗಿದೆ. ಅವುಗಳಲ್ಲಿ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವೂ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು. ಮುಖ್ಯ ದೇಗುಲದ ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ.

ಚಾಮುಂಡೇಶ್ವರಿ ದೇವಸ್ಥಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಾಮುಂಡಿ ಬೆಟ್ಟದಲ್ಲಿ ಹಿಂದೆ ದೇವಿಯ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರವೆಂಬ ದೊಡ್ಡ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. ಹಾಗೂ ದೇವಾಲಯವನ್ನು ಮುನ್ನೆಲೆಗೆ ತಂದಿದ್ದಾರೆ. ಚಾಮುಂಡಿ ಬೆಟ್ಟ ಅಭಿವೃದ್ಧಿಯಲ್ಲಿ ಹೊಯ್ಸಳ, ವಿಜಯನಗರ ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನೆಲೆಯನ್ನು ಗುರುತಿಸಲಾಗಿದೆ.

ಪ್ರಮುಖವಾಗಿ 1399 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದು, ಶ್ರದ್ಧಾ ಭಕ್ತಿಯಿಂದ ದೇವಸ್ಥಾನವನ್ನು, ಲೋಕ ಕಲ್ಯಾಣಾರ್ಥವಾಗಿ ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು ಎಂಬ ಇತಿಹಾಸವಿದೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಬರುವುದಕ್ಕೂ ಮೊದಲು ಮೈಸೂರು ರಾಜ್ಯ ಎಂಬ ಹೆಸರಿತ್ತು. ಮೈಸೂರಿನ ಅಧಿದೇವತೆ ಚಾಮುಂಡಿ ನಾಡದೇವಿಯಾಗಿದ್ದಳು. ಮೈಸೂರಿನ ದಸರಾ ನಾಡ ಹಬ್ಬವಾಗಿತ್ತು. ಹಾಗಾಗಿ ಕನ್ನಡ ನಾಡಿಗೂ ಮೈಸೂರಿನ ಚಾಮುಂಡಿಗೂ ಅವಿನಾಭಾವ ಸಂಬಂಧವಿದೆ. ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಮಾತ್ರವಲ್ಲದೇ ಜನರು ಭಾವನಾತ್ಮಕವಾಗಿಯೂ, ಆಧ್ಯಾತ್ಮಿಕವಾಗಿಯೂ ಚಾಂಮುಂಡಿ ಬೆಟ್ಟದ ಜತೆ ಸಂಬಂಧವನ್ನು ಹೊಂದಿದ್ದಾರೆ. ಈ ದೇವಿಯ ದರ್ಶನಕ್ಕಾಗಿ ಬಹುದೂರದಿಂದ, ದೇಶವಿದೇಶಗಳಿಂದ ಭಕ್ತಾಧಿಗಳು ಬಂದು ತಮ್ಮ ಹರಕೆಗಳನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಹೊಂದುತ್ತಿರುತ್ತಾರೆ. ಈ ದೇವಿಯು ಹರಕೆದೇವತೆಯಾಗಿ ಆಗಮೋಕ್ತ ಪೂಜಾದಿ ಉತ್ಸವಗಳನ್ನು ಕೈಗೊಳ್ಳುತ್ತಾ ಪರ್ವತಾಗ್ರದಲ್ಲಿ ಕುಳಿತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಸರ್ವರನ್ನು ರಕ್ಷಿಸುತ್ತಿರುತ್ತಾಳೆ ಎಂಬುದು ಜನರ ನಂಬಿಕೆ.

ನಮ್ಮ ಶರೀರದ ಒಳಗಡೆ ಹೇಗೆ ಪರಮಾತ್ಮನಿರುತ್ತಾನೋ ಹಾಗೇ 24 ತತ್ವಗಳಿರುವ ರಥದಲ್ಲೂ ಪರಮಾತ್ಮ ನೆಲೆಸಿರುತ್ತಾನೆ ಎಂಬುದು ಹಿಂದು ಶ್ರದ್ಧಾಳುಗಳ ನಂಬಿಕೆಯಾಗಿದೆ. 1982 ಕೊಯಮುತ್ತೂರಿನ ಭಕ್ತಾದಿಗಳು ಈಗಿನ ಮರದ ರಥವನ್ನು ಮಾಡಿಸಿದರು ಎನ್ನಲಾಗುತ್ತದೆ. ಹಾಲಿ ರಥವೂ ಶಿಥಿಲವಾಗುತ್ತ ಬಂದಿವೆ. ಹಾಗಾಗಿ ಹೊಸ ಚಿನ್ನದ ರಥ ನಿರ್ಮಿಸಿ ಚಾಮುಂಡಿ ದೇವಿಯ ರಥೋತ್ಸವ ಮಾಡಬೇಕು ಎಂಬುದು ಭಕ್ತರ ಸಂಕಲ್ಪ. ದೇವಿಗೆ ಹೊಸ ಚಿನ್ನದ ರಥ ನಿರ್ಮಿಸುವ ಪ್ರಸ್ತಾವ ಈ ಹಿಂದೆಯೇ ಬಂದಿತ್ತು. ಅದಕ್ಕೆ ಸುಮಾರು 100 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಈಡೇರಿಲ್ಲ. ಚಿನ್ನದ ರಥ ಮಾಡಲು ಸರ್ಕಾರ ಹಣ ಹಣದ ಅವಶ್ಯಕತೆ ಜೊತೆಗೆ . ಭಕ್ತಾದಿಗಳು ದುಡ್ಡು ಮತ್ತು ಚಿನ್ನವನ್ನು ಹಾಕುತ್ತಾರೆ. ಅದಕ್ಕಾಗಿ ಹುಂಡಿಗಳನ್ನು ಪ್ರತಿಷ್ಠಾಪಿಸಬೇಕು. ಮುಂದಿನ ದಸರಾದ ಒಳಗಡೆ ರಥ ನಿರ್ಮಿಸಿ ದೇವಸ್ಥಾನದ ಒಳಗಡೆ ಆಕೆಯನ್ನು ಮೆರವಣಿಗೆ ಮಾಡಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

RELATED ARTICLES
- Advertisment -
Google search engine

Most Popular