ಬೆಂಗಳೂರು: ಕೇಂದ್ರದಿಂದ ಬರಬೇಕಾದ ಪಿಂಚಣಿಯಂತೆ ಹಲವಾರು ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ನಡೆದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದ ಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದ ಬಗ್ಗೆ ಸಭೆಯಲ್ಲಿ ವಿವರ ನೀಡಿದ ಸಿಎಂ, ಪತ್ರವನ್ನೇ ಓದಿ ಸಂಸದರ ಗಮನ ಸೆಳೆದರು. “ರಾಜ್ಯ ಸರಕಾರವೇ ಬಹುತೇಕ ಹಣವನ್ನು ಖರ್ಚು ಮಾಡುವ ಯೋಜನೆಗಳಿಗೆ ಪ್ರಧಾನಿ ಮತ್ತು ಕೇಂದ್ರದ ಹೆಸರಿದೆ. ಆದರೂ ಚೂರು ಪಾರು ಹಣವೂ ಬರುತ್ತಿಲ್ಲ. ಈ ಅನ್ಯಾಯ ಪ್ರಶ್ನಿಸಬೇಕಲ್ಲಾ?” ಎಂದು ಹೇಳಿದರು.
15ನೇ ಹಣಕಾಸು ಆಯೋಗದಂತೆ 5495 ಕೋಟಿ ವಿಶೇಷ ಅನುದಾನ, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಸೇರಿ ಒಟ್ಟು 11,495 ಕೋಟಿ ರೂಪಾಯಿ ರಾಜ್ಯಕ್ಕೆ ಬರಬೇಕಾಗಿತ್ತು ಎಂದು ತಿಳಿಸಿದರು. ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ನೀಡಿದರೂ ಯಾವುದೇ ನೆರವು ಇಲ್ಲ ಎಂದು ಆರೋಪಿಸಿದರು.
ಪಿಂಚಣಿ ಭಾಗವಾಗಿ ರಾಜ್ಯವೇ 5665 ಕೋಟಿ ರೂಪಾಯಿ ಪಾವತಿಸುತ್ತಿದೆ, ಆದರೆ ಕೇಂದ್ರದಿಂದ 559 ಕೋಟಿ ಮಾತ್ರವೇ ಬರುತ್ತದೆ. ಇದನ್ನೂ ಎರಡು ವರ್ಷಗಳಿಂದ ಬಾಕಿ ಇಟ್ಟಿದೆ. “ನಾನು ನಿರ್ಮಲಾ ಸೀತಾರಾಮನ್ ಅವರನ್ನು ಎರಡು ಬಾರಿ ಭೇಟಿಯಾಗಿ ಮನವಿ ಮಾಡಿದರೂ ಫಲವಿಲ್ಲ. ಸಂಸದರು ಒಟ್ಟಾಗಿ ಇದು ಬೇಡಿಸಬೇಕು” ಎಂದು ಹೇಳಿದರು.