ಬೆಂಗಳೂರು, ಜುಲೈ 19: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಜರಿದ್ದರು. ಯೋಜನೆಗೆ ಅರ್ಹರಾಗಿರುವ ಮಹಿಳೆಯರು ಇಂದಿನಿಂದ ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭಿಸಬಹುದಾಗಿದೆ.
ಆಗಸ್ಟ್ 15 ಮತ್ತು 20 ರ ನಂತರ ಮಹಿಳೆಯರು ತಿಂಗಳಿಗೆ 2,000 ರೂಪಾಯಿಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ ಮತ್ತು ಯೋಜನೆಯ ನೋಂದಣಿ ಒಂದು ವರ್ಷದವರೆಗೆ ಮುಂದುವರಿಯುತ್ತದೆ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್‌ನಲ್ಲಿ ತಿಳಿಸಿದೆ.
ಕರ್ನಾಟಕದ 1.1 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ ಮತ್ತು ಸರ್ಕಾರವು ಈ ಯೋಜನೆಗೆ 18,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ಕಾಂಗ್ರೆಸ್ ಟ್ವೀಟ್ ಉಲ್ಲೇಖಿಸಿದೆ.
ಗೃಹಲಕ್ಷ್ಮಿ ಯೋಜನೆಯು ಭಾರತದ ಅತಿದೊಡ್ಡ ಮಹಿಳಾ-ಆಧಾರಿತ ನೇರ ನಗದು ವರ್ಗಾವಣೆ ಯೋಜನೆಯಾಗಿದೆ. ಈ ಯೋಜನೆಯು ಬೆಲೆ ಏರಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ (BPL), ಬಡತನ ರೇಖೆಗಿಂತ ಮೇಲಿರುವ (APL) ಮತ್ತು ಅಂತ್ಯೋದಯ ಕಾರ್ಡ್‌ಗಳಲ್ಲಿ ಮನೆ ಮುಖ್ಯಸ್ಥರಾಗಿ ಹೆಸರನ್ನು ನಮೂದಿಸಿರುವ ಮಹಿಳೆಯರು ಯೋಜನೆಗೆ ಅರ್ಹರಾಗಿರುತ್ತಾರೆ. ಆದಾಯ ತೆರಿಗೆ ಪಾವತಿಸುವ ಮಹಿಳೆಯರು ಮತ್ತು ಪತಿಯು ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಂಥವರ ಪತ್ನಿಯರು ಯೋಜನೆಗೆ ಅರ್ಹರಲ್ಲ.
ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವ ಮಹಿಳೆಯರು ಗ್ರಾಮಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಫಲಾನುಭವಿ ಮತ್ತು ಪತಿಯ ಆಧಾರ್ ಕಾರ್ಡ್‌ಗಳು ಮತ್ತು ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ ಐದು ಚುನಾವಣಾ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಸಮಾರಂಭದಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್ ಉಪಸ್ಥಿತರಿದ್ದರು