ಬೆಂಗಳೂರು: ಕರ್ನಾಟಕದಲ್ಲಿ ಕೂಡಾ ವಿಧಾನಮಂಡಲ ಅಂಗೀಕರಿಸಿದ ಕೆಲವು ಮಸೂದೆಗೆಳ ಬಗ್ಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ರಾಜ್ಯಪಾಲರು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಹೀಗಿದ್ದರೂ ನಮ್ಮ ಸರ್ಕಾರ ಅನಗತ್ಯವಾಗಿ ಈ ಬೆಳವಣಿಗೆಗೆ ರಾಜಕೀಯ ಬೆರೆಸದೆ ಸಂಯಮದಿಂದ ನಡೆದುಕೊಂಡಿದೆ ಎಂಬುದಾಗಿ ರಾಜ್ಯಪಾಲರ ನಡೆಗೆ ಸಿಎಂ ಸಿದ್ಧರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡು, ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು ದೇಶದ ಎಲ್ಲ ರಾಜ್ಯಪಾಲರು ಮತ್ತು ತೆರೆಯ ಹಿಂದೆ ಆಟವಾಡುತ್ತಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಿದೆ ಎಂದಿದ್ದಾರೆ.
ಸುಪ್ರೀಂಕೋರ್ಟಿನ ತೀರ್ಪು ರಾಜ್ಯಪಾಲ ಹುದ್ದೆಯ ಕರ್ತವ್ಯಗಳ ಇತಿ-ಮಿತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಕಾರಣದಿಂದಾಗಿ ಈ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗಿದೆ. ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ರಾಪ್ಟ್ರಪತಿಗಳ ಅಂಕಿತ ಪಡೆಯುವ ಪ್ರಕ್ರಿಯೆ ಗರಿಷ್ಠ ಮೂರು ತಿಂಗಳ ಅವಧಿಯೊಳಗೆ ನಡೆಯಬೇಕು ಎಂದು ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವುದರಿಂದ ಇಲ್ಲಿಯ ವರೆಗಿನ ಗೊಂದಲಗಳು ನಿವಾರಣೆಯಾಗಿದೆ ಎಂದು ಹೇಳಿದ್ದಾರೆ.