ಮಂಡ್ಯ: ಅಪಘಾತ ಹೆಚ್ಚಾಗಿ, ಸಾವಿನ ಹೆದ್ದಾರಿ ಎಂಬುದಾಗಿಯೇ ಕರೆಯಲಾಗುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿಗೆ ಇಂದು ಸಿಎಂ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿಗಳಾದ ನಂತರ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರು-ಮೈಸೂರು ಹೆದ್ದಾರಿಯ ವೀಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಮಂಡ್ಯ ಹೊರವಲಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗಾಗಿ ಉಮ್ಮಡಹಳ್ಳಿ ಗೇಟ್ ಬಳಿಯಲ್ಲಿ ಸ್ಪೀಡ್ ಡಿಟೆಕ್ಟರ್’ಗೆ ಚಾಲನೆ ನೀಡಿದರು.
ಈ ಮೂಲಕ ಹೊಸ ತಂತ್ರಜ್ಞಾನ ಬಳಸುವಂತ ಸ್ಪೀಡ್ ಡಿಟೆಕ್ಟರ್ ಗಳನ್ನು ಅಳವಡಿಸಲಾಗಿದೆ.
ಇದೀಗ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಾಲನೆ ನೀಡಿದಂತ ಸ್ಪೀಡ್ ಡಿಟೆಕ್ಟರ್ ಗಳು, ವಾಹನಗಳ ವೇಗ ಕ್ಯಾಪ್ಚರ್ ಮಾಡುವಂತ ಎಐ ತಂತ್ರಜ್ಞಾನವನ್ನು ಬಳಸಿದಂತ ಕ್ಯಾಮರಾಗಳನ್ನು ಒಳಗೊಂಡಿವೆ.
ಬೆಂ-ಮೈ ಹೆದ್ದಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ಬೆಂ-ಮೈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದಾವೆ. ಇಲ್ಲಿ ಸ್ಪೀಡ್ ಡಿಟೆಕ್ಟರ್ ಇರಲಿಲ್ಲ. ಈ ತಿಂಗಳು ಅಪಘಾತಗಳು ಕಡಿಮೆ ಆಗಿವೆ. ಜೂನ್ ತಿಂಗಳಲ್ಲಿ 20 ಅಪಘಾತಗಳು ಆಗಿವೆ. ಈ ತಿಂಗಳು ಕೇವಲ 5 ಅಪಘಾತಗಳು ಆಗಿವೆ. ಇದಕ್ಕಾಗಿಯೇ ಸ್ಪೀಡ್ ಡಿಟೆಕ್ಟರ್‌ನ್ನು ಅಳವಡಿಕೆ ಮಾಡಲಾಗಿದೆ ಎಂದರು.
ಇದು ಸ್ಪೀಡ್ ಮಾತ್ರವಲ್ಲ, ವಾಹನಗಳ ಚಲಾವಣೆಯ ಮೇಲು ಕಣ್ಣಿಟ್ಟಿರುತ್ತೆ. ಈ ಹೊಸ ನಿಯಮ ಉಲ್ಲಂಘನೆ ಮಾಡಿದ್ರೆ ಸಂಚಾರಿ ಪೊಲೀಸ್ ಕ್ರಮ ತೆಗೆದುಕೊಳ್ಳುತ್ತಾರೆ. ಸದ್ಯ ಎರಡು ಕಡೆ ಸ್ಪೀಡ್ ಡಿಟೆಕ್ಟರ್‌ನ್ನು ಹಾಕಲಾಗಿದೆ. ಮುಂದೆ 10 ಕಿಲೋಮೀಟರ್ ಗೆ ಒಂದರಂತೆ ಇವುಗಳನ್ನು ಹಾಕಲಾಗುತ್ತದೆ. ಆಗ ಅಪಘಾತಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದರು.
ಈ ಬಗ್ಗೆ ಅಧಿಕಾರಿಗಳು ಎನ್ ಹೆಚ್ ಎ ಅವರೊಂದಿಗೆ ಸಭೆ ಮಾಡಿದ್ದಾರೆ. ನಾನು ಸಹ ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇನೆ. ಇನ್ನೂ ಹೆಚ್ಚುವರಿ ಕೆಲಸ ಮಾಡಲು 151 ಕೋಟಿಗೆ ಪ್ರಸ್ತಾವನೆ ಕಳಿಸಿದ್ದಾರೆ. ನವೆಂಬರ್ ಬಳಿಕ ಹೆಚ್ಚುವರಿ ಕೆಲಸಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.
ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಗೇಟ್ ಬಳಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಸ್ಪೀಡ್ ಡಿಟೆಕ್ಟರ್ ಚಾಲನಾ ಕಾರ್ಯಕ್ರಮಕ್ಕೆ, ಸಿಎಂ ಸಿದ್ಧರಾಮಯ್ಯಗೆ ಸಚಿವ ಚಲುವರಾಯಸ್ವಾಮಿ, ಶಾಸಕ ಗಾಣಿಗ ರವಿ ಸೇರಿದಂತೆ ಇತರರು ಸಾಥ್ ನೀಡಿದರು.
