ಕರಾವಳಿ ಭಾಗದ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯ ಸ್ಥಾನಮಾನ ಲಭಿಸಿದ್ದು, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಗೆ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ನೀಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಇನ್ನು ಕಂಬಳ ಕ್ರೀಡೆಗಳಿಗೂ ಸಿಗಲಿದೆ.
ಕಂಬಳ ಅಸೋಸಿಯೇಷನ್ ನನ್ನು ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ತರುವಂತೆ ಎರಡು ವರ್ಷಗಳ ಹಿಂದೆ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಂತೆ ನಿರ್ಣಯವನ್ನು ಕೈಗೊಂಡು ಕಂಬಳಕ್ಕೆ ರಾಜ್ಯ ಸರಕಾರ ಅಧಿಕೃತ ಮಾನ್ಯತೆ ನೀಡಿದೆ.
ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಸರ್ಕಾರವು ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶ ಹೊರಬರುವವರೆಗೂ ಮಾನ್ಯತೆ ನೀಡಿದೆ. ಈ ಕುರಿತು ಹೊರಡಿಸಿದ ಅಧಿಕೃತ ಆದೇಶದಲ್ಲಿ, ಅಸೋಸಿಯೇಷನ್ ತನ್ನ ಆಡಳಿತ ಹಾಗೂ ಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಆದೇಶದ ಪ್ರಕಾರ, ಪ್ರತಿವರ್ಷ ಜೂನ್ 30ರೊಳಗೆ ಅಸೋಸಿಯೇಷನ್ ತನ್ನ ವಾರ್ಷಿಕ ಆಡಳಿತ ಮತ್ತು ಕಾರ್ಯಚಟುವಟಿಕೆಗಳ ವರದಿ, ಹಣಕಾಸಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡವಳಿ ಪ್ರತಿಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಜೊತೆಗೆ, ಮುಂದಿನ ವರ್ಷದ ಕಾರ್ಯಕ್ರಮಗಳ ಕ್ಯಾಲೆಂಡರ್ ಹಾಗೂ ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ನವೀಕರಿಸಿದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನೂ ಒದಗಿಸಲು ಸೂಚಿಸಲಾಗಿದೆ.
ಈ ಕ್ರಮದ ಮೂಲಕ ಅಸೋಸಿಯೇಷನ್‌ನ ಕಾರ್ಯಪದ್ಧತಿ ಕಾನೂನುಬದ್ಧ, ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲು ಸರ್ಕಾರ ಉದ್ದೇಶಿಸಿದ್ದು, ಆಡಳಿತಾತ್ಮಕ ಹೊಣೆಗಾರಿಕೆಯನ್ನು ಬಲಪಡಿಸುವತ್ತ ಈ ನಿರ್ಧಾರ ಪ್ರಮುಖ ಹೆಜ್ಜೆಯಾಗಿದೆ. ಇನ್ನು ಕಂಬಳ ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿರುವ ರಾಜ್ಯ ಕಂಬಳ ಅಸೋಸಿಯೇಷನ್‌ನಲ್ಲಿ ಒಟ್ಟು 18 ಮಂದಿ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜೀವಂಧರ್ ಬಲ್ಲಾಳ್, ಜೀವನದಾಸ ಅಡ್ಯಂತಾಯ ಹಾಗೂ ಗುಣಪಾಲ ಕಡಂಬ ಈ ಅಸೋಸಿಯೇಷನ್‌ನ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಕ್ರೀಡೆಯನ್ನು ಶಿಸ್ತುಬದ್ಧವಾಗಿ ಮತ್ತು ಸಮನ್ವಯದಿಂದ ಆಯೋಜಿಸಲು ಅಸೋಸಿಯೇಷನ್ ಪ್ರಮುಖ ಪಾತ್ರವಹಿಸಿದೆ. ಪ್ರತಿ ಕಂಬಳ ಸೀಸನ್‌ಗೆ ಸಂಬಂಧಿಸಿದ ವೇಳಾಪಟ್ಟಿ ತಯಾರಿಸುವುದು, ಆಯೋಜನಾ ಕಾರ್ಯಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಕ್ರೀಡೆಯ ಸಾಂಸ್ಕೃತಿಕ ಗೌರವವನ್ನು ಉಳಿಸುವತ್ತ ಕ್ರಮ ವಹಿಸುವುದು ಅಸೋಸಿಯೇಷನ್‌ನ ಮುಖ್ಯ ಉದ್ದೇಶವಾಗಿದೆ.