Friday, April 18, 2025
Google search engine

HomeUncategorizedರಾಷ್ಟ್ರೀಯಅನಂತನಾಗ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಸೇರಿ ನಾಲ್ವರಿ​ಗೆ ಕೀರ್ತಿ ಚಕ್ರ ಪ್ರಶಸ್ತಿ

ಅನಂತನಾಗ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಸೇರಿ ನಾಲ್ವರಿ​ಗೆ ಕೀರ್ತಿ ಚಕ್ರ ಪ್ರಶಸ್ತಿ

ನವದೆಹಲಿ: 2023ರ ಸೆಪ್ಟೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕರೊಂದಿಗಿನ ಕಾದಾಟದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರಿಗೆ ಈ ಸ್ವಾತಂತ್ರ್ಯ ದಿನದಂದು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ಘೋಷಿಸಲಾಗಿದೆ. ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.

ಭಾರತೀಯ ಸೇನೆಯ 19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಮತ್ತು ಸಿಪಾಯಿ ಪರ್ದೀಪ್ ಸಿಂಗ್ ಅವರು ಕೋಕರ್‌ನಾಗ್ ಪ್ರದೇಶದ ಗಡೋಲ್‌ನಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಪ್ರಾಣ ತ್ಯಾಗ ಮಾಡಿದರು. ಕಳೆದ ವರ್ಷ ಸೆಪ್ಟೆಂಬರ್ 13ರಂದು ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿತ್ತು.

ಮೂವರು ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು ನಾಲ್ವರು ಸಿಬ್ಬಂದಿಗೆ ಕೀರ್ತಿ ಚಕ್ರ ನೀಡಲಾಗಿದೆ. ಸೇನೆಯಿಂದ ಕೀರ್ತಿ ಚಕ್ರ ಪಡೆದ ಇತರ ಇಬ್ಬರೆಂದರೆ ರೈಫಲ್‌ಮ್ಯಾನ್ ರವಿ ಕುಮಾರ್ ಮತ್ತು ಮೇಜರ್ ಎಂ. ನಾಯ್ಡು.

ಕರ್ನಲ್ ಮನಪ್ರೀತ್ ಸಿಂಗ್ ಯಾರು?:

19 ರಾಷ್ಟ್ರೀಯ ರೈಫಲ್ಸ್ (RR) ಘಟಕದ ಅತ್ಯಂತ ಗೌರವಾನ್ವಿತ ಕಮಾಂಡಿಂಗ್ ಆಫೀಸರ್ ಆಗಿರುವ ಕರ್ನಲ್ ಮನ್​ಪ್ರೀತ್ ಸಿಂಗ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಲಾರ್ಕಿಪೋರಾ, ಝಲ್ದೂರ ಮತ್ತು ಕೋಕರ್ನಾಗ್‌ನಲ್ಲಿ ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿ ಜನರು ಹೀರೋ ಎಂದು ಸ್ಮರಿಸಿಕೊಳ್ಳುತ್ತಾರೆ. ಅನೇಕ ಸ್ಥಳೀಯರು ಅವರನ್ನು ಶೌರ್ಯ, ನಾಯಕತ್ವ ಮತ್ತು ನಿಸ್ವಾರ್ಥ ತ್ಯಾಗದ ಸಂಕೇತವೆಂದು ನೆನಪಿಸಿಕೊಳ್ಳುತ್ತಾರೆ.

ಚಂಡೀಗಢದ ಬಳಿಯ ಪಂಜಾಬ್‌ನ ಸಣ್ಣ ಹಳ್ಳಿಯಾದ ಭರೋಂಜಿಯಾನ್‌ನವರಾದ ಕರ್ನಲ್ ಮನ್​ಪ್ರೀತ್ ಸಿಂಗ್ ಅವರು 19 ಆರ್‌ಆರ್ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದರು. ಉಗ್ರರ ನಡುವಿನ ಗುಂಡಿನ ಕಾರ್ಯಾಚರಣೆಯಲ್ಲಿ ಅವರು ತಮ್ಮ ಜೀವವನ್ನು ಕಳೆದುಕೊಂಡರು. ಆ ಘಟಕದೊಂದಿಗೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಕೇವಲ 4 ತಿಂಗಳು ಬಾಕಿ ಉಳಿದಿತ್ತು.

ಕರ್ನಲ್ ಸಿಂಗ್ ಅವರು ತಮ್ಮ ಪತ್ನಿ, 6 ವರ್ಷದ ಮಗ ಮತ್ತು 2 ವರ್ಷದ ಮಗಳನ್ನು ಅಗಲಿದ್ದಾರೆ. ಅವರು ಯುದ್ಧ ಪರಿಣತರಾಗಿದ್ದರು ಮತ್ತು 19 ರಾಷ್ಟ್ರೀಯ ರೈಫಲ್ಸ್‌ನ ಎರಡನೇ ಕಮಾಂಡ್ ಆಗಿದ್ದ ಅವಧಿಯಲ್ಲಿ ಸೇನಾ ಪದಕವನ್ನು ಪಡೆದಿದ್ದರು.

RELATED ARTICLES
- Advertisment -
Google search engine

Most Popular