Tuesday, April 8, 2025
Google search engine

Homeರಾಜ್ಯಸುದ್ದಿಜಾಲಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ

ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ

ಆತ್ಮ ವಿಶ್ವಾಸ ಜೊತೆಗೆ ನಿರಂತರ ಅಭ್ಯಾಸವಿರಲಿ

ಬಳ್ಳಾರಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸುತ್ತಿರುವವರು ತಮ್ಮ ಆತ್ಮ ವಿಶ್ವಾಸದ ಜೊತೆಗೆ ನಿರಂತರ ಅಭ್ಯಾಸ ನಡೆಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಯುವಸಮೂಹಕ್ಕೆ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆವುಳ್ಳ ಯುವಕ-ಯುವತಿಯರಿಗಾಗಿ ಕೆಎಎಸ್, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳ ಪೂರ್ವ ತರಬೇತಿ ಆಯ್ಕೆಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರ ಅಭ್ಯಾಸ ಮತ್ತು ಪ್ರಯತ್ನಗಳಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಅಡ್ಡಮಾರ್ಗಗಳಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಶ್ವತ ಯಶಸ್ಸು ದೊರಕದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಸ್ತುತ ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಇಚ್ಛಾಶಕ್ತಿ ತೋರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಪದವಿ ಹಂತದ ವಿದ್ಯಾಭ್ಯಾಸದ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದರು. ಶ್ರದ್ಧೆ-ಏಕಾಗ್ರತೆಯಿಂದ ಅಧ್ಯಯನ ನಡೆಸಬೇಕು. ನಿರ್ದಿಷ್ಟ ಗುರಿ ನಿಗದಿ ಮಾಡಿಕೊಂಡು ಸಮಾಜದ ಉನ್ನತ ಸ್ಥಾನ ಅಲಂಕರಿಸಲು ಶ್ರಮವಹಿಸಬೇಕು ಎಂದು ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳು ಯೋಜನೆ ರೂಪಿತ ದಿನಚರಿ ಸಿದ್ಧಪಡಿಸಿಕೊಂಡು ವೇಳೆಯ ಪ್ರಕಾರ ಅಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಯುಪಿಎಸ್‌ಸಿ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೂ ಸಹ ಪಠ್ಯಕ್ರಮ ದೊರೆಯಲಿದ್ದು, ಉತ್ತಮ ಮಾರ್ಗದರ್ಶಕರ ದಾರಿಯಲ್ಲಿ ಅಭ್ಯಾಸ ನಿರತರಾಗಬೇಕು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರು ಮಾತನಾಡಿ, ಸ್ಪರ್ಧಾ ಅಭ್ಯರ್ಥಿಗಳು ಯಾವುದೇ ಅಡೆತಡೆಗಳಿಗೆ ಕಿವಿಗೊಡದೇ ಪರೀಕ್ಷಾ ತಯಾರಿ ನಡೆಸಿ, ಸಾಧನೆಯ ಶಿಖರ ಏರಬೇಕು ಎಂದು ಧೈರ್ಯ ತುಂಬಿದರು.

ಐಎಎಸ್, ಐಪಿಎಸ್‌ನಂತಹ ಉದ್ಯೋಗಾಂಕ್ಷಿಗಳು ಕೌಟುಂಬಿಕ ಕಾರಣಗಳಿಗೆ ಎದೆಗುಂದದೆ, ಸತತ ಪರಿಶ್ರಮದಿಂದ ಯಶಸ್ಸು ಕಾಣಬೇಕು ಎಂದು ತಿಳಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು, ವಿದ್ಯಾರ್ಥಿಗಳೊಡನೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಯೋಜನಾ ನಿರ್ದೇಶಕ ವಾಗೀಶ್ ಶಿವಾಚಾರ್ಯ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ಪ್ರಾಣೇಶ್, ಸಿಬ್ಬಂದಿಗಳಾದ ರಾಜು, ದುಂಡೇಶ್ ಸೇರಿದಂತೆ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನೋಂದಣಿ ಮಾಹಿತಿ: ಒಟ್ಟು ೧೨೫ ಅಭ್ಯರ್ಥಿಗಳಿಗೆ ಕೆಎಎಸ್, ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳ ಸಿದ್ಧತೆಗಾಗಿ ೦೫ ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು hnanathis://bchitattachidii.tiichchi.it ವೆಬ್‌ಸೈಟ್‌ಗೆ ನೀಡಬೇಕು. ಅರ್ಜಿ ಸಲ್ಲಿಸಲು ಆ.೨೯ ಕೊನೆಯ ದಿನವಾಗಿದೆ

RELATED ARTICLES
- Advertisment -
Google search engine

Most Popular