ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮೇ ೨೪ರಂದು ಮಧ್ಯಾಹ್ನ ಪ್ರಕಟವಾಗಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಪರೀಕ್ಷೆ ಬರೆದ ೧,೦೩,೭೯೯ ಅಭ್ಯರ್ಥಿಗಳ ಪೈಕಿ ೩೫,೧೨೪ ಮಂದಿ ಕರ್ನಾಟಕದವರಾಗಿದ್ದಾರೆ. ಅಲ್ಲದೇ, ಮೊದಲ ೧೦ ರ್‍ಯಾಕ್ ಪಡೆದವರಲ್ಲಿ ೮ ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ. ೬೮,೬೭೫ ಇತರ ರಾಜ್ಯಗಳ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು ೧.೨ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಾಮೆಡ್ ಕೆ ಅಂಡರ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆ ೨೦೨೪ ಫಲಿತಾಂಶವನ್ನು ಕಾಮೆಡ್ ಕೆನ ಅಧಿಕೃತ ವೆಬ್‌ಸೈಟ್ comedk.orgನಲ್ಲಿ ಪರಿಶೀಲನೆ ಮಾಡಬಹುದು.
ಕರ್ನಾಟಕದ ೧೫೦ ಖಾಸಗಿ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ ೪೦ ಖಾಸಗಿ ವಿವಿಗಳಲ್ಲಿ ಸುಮಾರು ೨೨ ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಆರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು.
ಕಾಮೆಡ್ ಕೆ ಸ್ಕೋರ್‌ಕಾರ್ಡ್ ಹೆಸರು ಜತೆಗೆ ಅರ್ಜಿ ಅಥವಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಪರೀಕ್ಷಾ ಪ್ರವೇಶ ಟಿಕೆಟ್ ಸಂಖ್ಯೆ, ವರ್ಗ, ಆಯ್ದ ಕೋರ್ಸ್, ಫೋಟೋ ಐಡಿ, ಇತರ ವಿವರಗಳು, ಪಡೆದ ಸ್ಕೋರ್ ಮತ್ತು ಪಡೆದ ಶ್ರೇಣಿಯಂತಹ ವಿವರಗಳನ್ನು ಒಳಗೊಂಡಿರುತ್ತದೆ. ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ಅಭ್ಯರ್ಥಿಗಳು ತಕ್ಷಣದ ತಿದ್ದುಪಡಿಗಾಗಿ ಪರೀಕ್ಷಾ ಪ್ರಾಧಿಕಾರವನ್ನು ತಕ್ಷಣವೇ ಸಂಪರ್ಕಿಸಬಹುದು ಎಂದು ಹೇಳಿದೆ.