ನವದೆಹಲಿ : ವಾಣಿಜ್ಯ ಅಡುಗೆ ಅನಿಲ (ಎಲ್‌ಪಿಜಿ) ದರ ೧೯ ಕೆಜಿ ಸಿಲಿಂಡರ್‌ಗೆ ೨೦೯ ರೂ. ಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಸದ್ಯ ಗೃಹಬಳಕೆಯ ಎಲ್‌ಪಿಜಿಯ ಬೆಲೆ ಪ್ರತಿ ೧೪.೨ ಕೆಜಿ ಸಿಲಿಂಡರ್‌ಗೆ ರೂ. ೯೦೩ ರಷ್ಟಿದೆ.
ಇದೇ ವೇಳೆ ವಿಮಾನಯಾನ ಇಂಧನದ ಬೆಲೆಯನ್ನು ಹೆಚ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ದೇಶದಲ್ಲಿ ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಸೀಸನ್ ಆರಂಭವಾಗಲಿದೆ. ಈ ಹಿನ್ನೆಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆಗಾಗಿ ವಿಮಾನಗಳನ್ನು ಬಳಸುತ್ತಾರೆ. ಹೀಗಿರುವಾಗ, ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ಪ್ರಯಾಣಿಕರಿಗೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಬಿಗ್ ಶಾಕ್ ನೀಡಿದ್ದು, ಇಂದು ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯನ್ನು ಶೇಕಡಾ ೫ ರಷ್ಟು ಹೆಚ್ಚಿಸಿವೆ.
ಕಳೆದ ಜುಲೈ ೧ ರಂದು ಕೂಡ ತೈಲ ಕಂಪನಿಗಳು ಎಟಿಎಫ್ ಬೆಲೆಯನ್ನು ಶೇಕಡಾ ೧.೬೫ ರಷ್ಟು ಹೆಚ್ಚಿಸಿದ್ದವು. ಜೆಟ್ ಇಂಧನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಅದರ ಬೆಲೆ ೯೭ ಡಾಲರ್‌ಗೆ ತಲುಪಿದೆ. ಜುಲೈನಿಂದ ಇಲ್ಲಿಯವರೆಗೆ ಕಚ್ಚಾ ತೈಲದ ಬೆಲೆ ಶೇ.೩೦ರಷ್ಟು ಏರಿಕೆ ಕಂಡಿದ್ದು, ಸೆಪ್ಟೆಂಬರ್ ತಿಂಗಳೊಂದರಲ್ಲೇ ಶೇ.೧೫ರಷ್ಟು ಹೆಚ್ಚಳವಾಗಿದೆ.