ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಷೇರುದಾರ ಸದಸ್ಯರಾಗಿರುವ ಶಿಕ್ಷಕರ ಹಿತ ಕಾಯಲು ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಸಂಘದ ನೂತನ ಅಧ್ಯಕ್ಷ ಚಿಕ್ಕಕೊಪ್ಪಲು ಟಿ. ಪುರುಷೋತ್ತಮ್ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಪತ್ತಿನ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾಗಿರುವ ಸಂಘದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದು ಆ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ಸಂಘವನ್ನು ಸಾಲ ನೀಡಿಕೆಗೆ ಮಾತ್ರ ಸೀಮಿತಗೊಳಿಸದೆ ಪದಾಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡುವುದರ ಜೊತೆಗೆ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು ಇದಕ್ಕೆ ಸರ್ವರೂ ಸಹಕಾರ ನೀಡಬೇಕೆಂದು ಕೋರಿದರು.
ಪ್ರಸ್ತುತ ನಮ್ಮ ಸಂಘವು ಷೇರುದಾರ ಸದಸ್ಯರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚುವರಿ ಸಾಲ ವಿತರಣೆ ಮಾಡುವುದರೊಂದಿಗೆ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ನಿಧಿ ಸ್ಥಾಪಿಸಿ ಅದರೊಂದಿಗೆ ಆರೋಗ್ಯ ಶಿಬಿರಗಳನ್ನು ಆಲಿಸುವುದಾಗಿ ಪ್ರಕಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಕೃಷ್ಣಪ್ಪ ಮಾತನಾಡಿ ಸಹಕಾರ ಸಂಘಗಳಿಂದ ಸರ್ವವು ಸಾಧ್ಯವಾಗಲಿದ್ದು ಇದನ್ನು ಅರಿತು ಸದಸ್ಯರು ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು ಎಂದು ಸಲಹೆ ನೀಡಿದರು.
ಹತ್ತು ವರ್ಷಗಳ ಅವಧಿಯಲ್ಲಿ ಸಾಮರಸ್ಯ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಗಣನೀಯ ಸಾಧನೆ ಮಾಡಿದ್ದು ಭವಿಷ್ಯದಲ್ಲಿ ನೂತನ ಅಧ್ಯಕ್ಷ ಟಿ. ಪುರುಷೋತ್ತಮ್ ಅವರ ನೇತೃತ್ವದಲ್ಲಿ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾಗಿ ಎಸ್.ವಿ. ಗೋವಿಂದರಾಜು, ನಿರ್ದೇಶಕರಾಗಿ ಸೈಯದ್ ರಿಜ್ವಾನ್, ಎಂ. ಮಂಜು ರಾಜ್, ಎನ್. ಎಲ್ .ಮುರಳೀಧರ, ರವಿ, ಎ.ಜಿ. ಅನುಪಮ, ಮಂಜುನಾಥ್, ಶಿವಮೂರ್ತಿ, ಕೃಷ್ಣ ನಾಯಕ, ಬಿ. ಶೀಲಾ, ಪ್ರಕಾಶ್, ಸಿ.ಎಸ್. ಮಂಜುನಾಥ್, ಕೆ.ಟಿ. ಸ್ವಾಮಿ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ಮೋಹನ ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ಬಿ ಆರ್ ಸಿ ಕೆ. ವೆಂಕಟೇಶ್ ಮಾತನಾಡಿದರು. ಅಧ್ಯಕ್ಷ ಟಿ. ಪುರುಷೋತ್ತಮ್ ಸಂಘದ ಎಲ್ಲಾ ಸದಸ್ಯರಿಗೂ ಉಡುಗೊರೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಅಭಿನಂದಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಕೆ.ಎಸ್.ಗಂಗಾಧರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ. ಎನ್. ಸ್ವಾಮಿ, ಸಿಆರ್ ಪಿ ಸಿ. ಎನ್.ಪ್ರಭು, ಶಿಕ್ಷಕರಾದ. ಒಂಟಿಮನೆನಾಗರಾಜು, ಡಿ.ಟಿ.ಕುಮಾರ್, ಪುಟ್ಟಣ್ಣಯ್ಯ, ಪುಟ್ಟಯ್ಯ ಮತ್ತಿತರರು ಇದ್ದರು.