ಬೆಂಗಳೂರು: ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ಆ ಮೂಲಕ ನುಡಿದಂತೆ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಕುರಿತು ಜೇವರ್ಗಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೇವರ್ಗಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ನಾವು ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ನಡೆದಿದ್ದು, ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ವಿಧಾನಸಭೆ ಸದಸ್ಯರು ಹಾಗೂ ಲೋಕಸಭೆ ಸದಸ್ಯರನ್ನು ಆಯ್ಕೆ ಮಾಡಿದ್ದೀರಿ. ಆಮೂಲಕ ರಾಜ್ಯದಲ್ಲಿ ನಮಗೆ ದೊಡ್ಡ ಶಕ್ತಿ ನೀಡಿದ್ದು, ನಿಮಗೆ ನಮಿಸುತ್ತೇನೆ ಎಂದು ಹೇಳಿದರು.
1 ಸಾವಿರ ಕೋಟಿ ಹಣವನ್ನು ಈ ಒಂದು ಕ್ಷೇತ್ರಕ್ಕೆ ಮಾತ್ರ ನೀಡಲಾಗಿದ್ದು, ಇತ್ತೀಚೆಗೆ 4-5 ಬಾರಿ ನಾನು ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿದ್ದೇನೆ. ಈ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ಮೊತ್ತದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಬೀದರ್ ನಲ್ಲಿ 2 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ, ಕಲ್ಯಾಣ ಪಥ ಯೋಜನೆಗೆ ಚಾಲನೆ ಸೇರಿದಂತೆ ಅನೇಕ ಕಾರ್ಯಕ್ರಮಕ್ಕೆ ಬಂದಿದ್ದೇನೆ.
ಪ್ರತಿ ವರ್ಷ 5 ಸಾವಿರ ಕೋಟಿ ಮೊತ್ತವನ್ನು ಈ ಭಾಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಇದನ್ನು ನೋಡಿದರೆ ನಮ್ಮ ಕ್ಷೇತ್ರ ಕೂಡ ಈ ಭಾಗದಲ್ಲೇ ಇದ್ದಿದ್ದರೆ ನಮಗೂ ಇಷ್ಟು ದೊಡ್ಡ ಮಟ್ಟದ ಅನುದಾನ ಸಿಗುತ್ತಿತ್ತು ಎಂದು ಭಾವಿಸುತ್ತೇನೆ. ನಾನು ಡಿಸಿಎಂ ಆಗಿದ್ದರು ನನ್ನ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಮಗಾರಿ ಕೈಗೊಳ್ಳಲು ಆಗಿಲ್ಲ. ನೀವು ಅದೃಷ್ಟವಂತರು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಕೆಪಿಎಸ್ ಶಾಲೆಗಳ ಪ್ರಾರಂಭ ನೋಡಿದಾಗ, ಒಂದು ಮಾತು ನೆನಪಾಗುತ್ತಿದೆ. ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ವಿದ್ಯೆ. ನಮ್ಮ ಸರ್ಕಾರ ಬಂದ ನಂತರ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ನನ್ನನ್ನು ಸಿಎಸ್ಆರ್ ಶಾಲೆಗಳ ಸಮಿತಿ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳನ್ನು ಸಿಎಸ್ಆರ್ ಅನುದಾನದ ಅಡಿ ನಿರ್ಮಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ.
ಅಜಯ್ ಸಿಂಗ್ ಅವರು ನೀರಾವರಿ ವಿಚಾರವಾಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆ ಆಗಲೇಬೇಕು ಎಂದು ಪಟ್ಟು ಹಿಡಿದು, 360 ಕೋಟಿ ಅನುದಾನವನ್ನು ಪಡೆದಿದ್ದಾರೆ. ಇದಕ್ಕೆ ಕಳೆದ ಡಿಸೆಂಬರ್ 30ರಂದು ನಮ್ಮ ಸಭೆಯಲ್ಲಿ ಅನುಮೋದನೆ ನೀಡಿದ್ದೇವೆ. ಈ ಯೋಜನೆ ಕಾಮಗಾರಿ ಕೆಲಸ ಪ್ರಾರಂಭವಾಗಿದೆ ಎಂದು ವಿವರಿಸಿದರು.
ಇಲ್ಲಿ ಅನೇಕ ಮಹಿಳೆಯರು ಬಂದಿದ್ದೀರಿ. ನಮ್ಮ ಸರ್ಕಾರ ನಿಮಗೆ ಗ್ಯಾರಂಟಿ ಯೋಜನೆ ನೀಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇದೇ ಜಿಲ್ಲೆಯಲ್ಲಿ ನಾವು ಗೃಹಜ್ಯೋತಿ ಯೋಜನೆ ಉದ್ಘಾಟಿಸಿದೆವು. ಎಲ್ಲಾ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ. ಇಂತಹ ಸರ್ಕಾರ, ಶಾಸಕರಿಗೆ ಹಾಗೂ ಇಲ್ಲಿನ ಸಂಸದರಿಗೆ ನಿಮ್ಮ ಆಶೀರ್ವಾದ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು.
ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿ ಅವರು ಅಲಂಕರಿಸಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಎಲ್ಲಾ ಸಚಿವರು, ಶಾಸಕರು ಒಟ್ಟಾಗಿ ಸೇರಿ ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಾವು ನಿಮ್ಮ ಜೊತೆ ಸದಾ ಇದ್ದೇವೆ. ನಿನ್ನೆ ಅಜಯ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ 1 ಎಕರೆ ಜಮೀನನ್ನು ದಾನವಾಗಿ ಬರೆದುಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.



