ಬೆಂಗಳೂರು: ಇದೇ ಡಿ.5ರಂದು ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಾಸನದಲ್ಲಿ ಹಮ್ಮಿಕೊಂಡಿರುವ ʻಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶʼದ ವಿರುದ್ಧ ಅನಾಮಧೇಯ ವ್ಯಕ್ತಿಯಿಂದ ಎಐಸಿಸಿ ನಾಯಕರಿಗೆ ದೂರು ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಪತ್ರದಲ್ಲಿ ಹೆಸರು ಮರೆಮಾಚಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಾಯಮಧೇಯ ವ್ಯಕ್ತಿಯಿಂದ ದೂರು ಸಲ್ಲಿಕೆ ಮಾಡಲಾಗಿದೆ.
ದೂರಿನ ಪತ್ರದಲ್ಲಿ ಏನಿದೆ?
ಹಾಸನದಲ್ಲಿ ಸಿದ್ದರಾಮಯ್ಯ ಪರ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ. ಇದನ್ನು ಪಕ್ಷದ ವೇದಿಕೆಯಿಂದ ಹೊರತಾದ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ. ಇಲ್ಲಿ ಆಯೋಜಕರೆಲ್ಲ ಪಕ್ಷದ ಸಚಿವರು, ಪಕ್ಷದ ಶಾಸಕರು ಮುಖಂಡರೇ ಆಗಿದ್ದಾರೆ. ಹೀಗಿದ್ದು ಸಹ ಯಾಕೆ ಪಕ್ಷದ ಚಿಹ್ನೆ ಮೇಲೆ ಸಮಾವೇಶ ಮಾಡುತ್ತಿಲ್ಲ..? ವೈಯಕ್ತಿಕ ಬಲ ಪ್ರದರ್ಶನಕ್ಕೆ ಹೀಗೆ ಪಕ್ಷದ ನಾಯಕರನ್ನು ಬಳಸಿಕೊಳ್ಳಲಾಗುತ್ತಿದೆ. ಅಧಿಕಾರ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಸಮಾವೇಶ ಮಾಡುವ ಉದ್ದೇಶ ಏನು…? ಸ್ವಾಭಿಮಾನ ಸಮಾವೇಶವನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡಿ. ಪಕ್ಷದ ವೇದಿಕೆ ಬಿಟ್ಟು ಮಾಡುವ ಉದ್ದೇಶ ಒಳ್ಳೆಯದಲ್ಲ. ಕಾಂಗ್ರೆಸ್ ಚಿಹ್ನೆ ಬಳಸಿಕೊಂಡೇ ಹಾಸನ ಸಮಾವೇಶ ಆಯೋಜನೆ ಮಾಡಿ. ಸಿದ್ದರಾಮಯ್ಯ ಹಾಗೂ ಉಳಿದ ಸಚಿವರಿಗೆ ತಿಳಿ ಹೇಳುವಂತೆ ದೂರಿನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ರದ ಜೊತೆಗೆ ಸಚಿವರಾದ ಕೆ.ಎನ್ ರಾಜಣ್ಣ, ಹೆಚ್.ಸಿ ಮಹದೇವಪ್ಪ, ಎಂಎಲ್‌ಸಿ ಯತೀಂದ್ರ ಸ್ಥಳ ಪರಿಶೀಲನೆ ಮಾಡುತ್ತಿರುವ ಫೋಟೋಗಳನ್ನೂ ಲಗತ್ತಿಸಲಾಗಿದೆ.
ಡಿಸೆಂಬರ್ 5ರಂದು ಹಾಸನದ ಕೃಷ್ಣನಗರದಲ್ಲಿ (ಹಾಸನ-ಅರಸೀಕೆರೆ ರಸ್ತೆ) ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಶುರುವಾಗಲಿದ್ದು, ಲಕ್ಷಾಂತರ ಸಂಖ್ಯೆಯ ಜನರು ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.