ಮಂಡ್ಯ: ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ ರಾಜಭವನಕ್ಕೆ ತಮ್ಮ ವಿರುದ್ಧ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ, ಕೃಷಿ ಸಚಿವ ಚಲುವರಾಯಸ್ವಾಮಿ, ಲೆಟರ್ ಬಗ್ಗೆ ನನಗೆ ಗೊತ್ತಿಲ್ಲ. ಜೆಡಿ ಬಳಿ ಕೇಳಿದಾಗ ಫೇಕ್ ಲೆಟರ್ ಎಂದಿದ್ದಾರೆ. ಆದರೂ ಈ ಬಗ್ಗೆ ಸತ್ಯಾಸತ್ಯತೆ ತಿಳಿದು ತನಿಖೆಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಅವರು, ಬಹಳ ಜನ ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡಲು ಕಾದಿದ್ದಾರೆ. ಒಂದು ವೇಳೆ ತಪ್ಪು ಎಸಗಿದ್ರೆ ಕಾರ್ಯದರ್ಶಿಗೆ ತನಿಖೆ ನಡೆಸಲು ಸೂಚಿಸುತ್ತೇನೆ. ಜಂಟಿ ನಿರ್ದೇಶಕರು ಫೇಕ್ ಲೆಟರ್, ನಮ್ಮಲ್ಲಿ ಯಾರು ಆ ತರಹದ ಅಧಿಕಾರಗಳಿಲ್ಲ ಎಂದಿದ್ದಾರೆ.
ನಮ್ಮನ್ನ ಹೆಚ್ಚೆಚ್ಚು ಟಾರ್ಗೆಟ್ ಮಾಡುವುದರಿಂದ ಮತ್ತಷ್ಟು ಪ್ರಕಾಶಮಾನವಾಗುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಜಂಟಿ ನಿರ್ದೇಶಕರು ಯಾರ ಬಳಿ ಮಾತನಾಡುವುದಾಗಲಿ, ಭೇಟಿ ಮಾಡುವುದಾಗಲಿ ಮಾಡಿಲ್ಲ. ನಾನು ಯಾವ ಎಡಿ ಗಳನ್ನೂ ಭೇಟಿ ಮಾಡಿಲ್ಲ. ರಾಜ್ಯದಲ್ಲೇ ಮಾಡಿಲ್ಲ, ನನ್ನ ಜಿಲ್ಲೆಯಲ್ಲಿ ಮಾಡ್ತೀನಾ? ಎಂದು ತಿಳಿಸಿದರು.
ಬೆಳಿಗ್ಗೆ ಎದ್ದು ತಿಂಡಿ, ಊಟ ಮಾಡದೇ ನನ್ನ ಟಾರ್ಗೆಟ್ ಮಾಡುವುದೆ ಕೆಲವರಿಗೆ ಕೆಲಸ. ಅದಕ್ಕೆ ನನಗೆ ಬೇಜಾರಿಲ್ಲ, ನನ್ನ ಕೆಲಸ ನಾನು ಮಾಡ್ತೀನಿ ಎಂದು ಹೇಳಿದರು.
ನೈಸ್ ರೋಡ್ ಹಗರಣ ಹೆಚ್ ಡಿಕೆ ದಾಖಲೆ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಡಲಿ ನಾವು ಯಾವತ್ತು ಬೇಡ ಅಂತ ಹೇಳಿಲ್ಲ. ನೈಸ್ ರೋಡ್ ವಿಚಾರಕ್ಕೆ ನಾವು ಹೋರಾಟ ಮಾಡಿದ್ದೇವೆ. ಯಾವಾಗ ಆರಂಭ ಆಯ್ತು ಏನೇನು ಆಯ್ತು ಬಿಡುಗಡೆ ಮಾಡಲಿ ಅವರೇ. ಅವರೇ ಅಧಿಕಾರದಲ್ಲಿ ಇದ್ರು. ಅವರೇ ಆಪಾದನೆ ಎದುರಿಸ್ತಿದ್ರು ಈಗಾ ಅವರೇ ಕಂಪ್ಲೆಂಟ್ ಮಾಡ್ತಿದ್ದಾರೆ ಮಾಡ್ಲಿ ಎಂದು ತಿರುಗೇಟು ನೀಡಿದರು.