ಬೆಂಗಳೂರು : ಬಾಲಿವುಡ್ ಖ್ಯಾತ ಗಾಯಕ ಹಾಗೂ ನಟ ಲಕ್ಕಿ ಅಲಿ ತಮ್ಮ ಬೆಂಗಳೂರಿನ ಜಮೀನನ್ನು ಭೂ ಮಾಫಿಯಾ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿ ಭೂಮಿ ಕಬಳಿಕೆ ಮಾಡಿರುವ ಆರೋಪವನ್ನು ರೋಹಿಣಿ ಸಿಂಧೂರಿ ವಿರುದ್ಧ ಹೊರಿಸಿದ್ದಾರೆ. ಬೆಂಗಳೂರಿನ ನ್ಯೂ ಯಲಹಂಕ ಟೌನ್ ಬಳಿ ಇರುವ ಟ್ರಸ್ಟ್ ಒಂದಕ್ಕೆ ಸೇರಿರುವ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಕಿ ಅಲಿ ಆರೋಪ ಮಾಡಿದ್ದಾರೆ. ಮಾತ್ರವಲ್ಲ ಈ ಭೂ ಹಗರಣದಲ್ಲಿ ಯಲಹಂಕ ಎಸಿಪಿ ಮಂಜುನಾಥ್, ಸರ್ವೇಯರ್ ಮನೋಹನ್ ಶಾಮೀಲು ಆಗಿರುವ ಆರೋಪ ಮಾಡಿದ್ದಾರೆ. ಈ ಸಂಬಂಧ ಕರ್ನಾಟಕ ಲೋಕಾಯುಕ್ತದಲ್ಲಿ ಗಾಯಕ ಲಕ್ಕಿ ಅಲಿ ದೂರು ದಾಖಲಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರಲ್ಲಿಯೂ ಲಕ್ಕಿ ಅಲಿ ದೂರು ಸಲ್ಲಿಸಿದ್ದರು. ಈ ಕುರಿತಂತೆ ಸರಣಿ ಟ್ವೀಟ್ಗಳನ್ನು ಮಾಡಿದ್ದ ಅವರು, ಯಲಹಂಕ ಬಳಿಯ ಕೆಂಚೇನಹಳ್ಳಿ ಬಳಿ ಇರುವ ತನ್ನ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಎಸಿಪಿಯವರಿಗೆ ದೂರು ನೀಡಿದ್ರೂ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಸ್ಥಳೀಯ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ. ರೋಹಿಣಿ ಸಿಂಧೂರಿ ಕುಟುಂಬದ ಕಡೆಯೇ ನಿಂತಿದ್ದಾರೆ. ನಾವು ಕಳೆದ 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.
ಅಲ್ಲದೇ ಅಂದಿನ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರಿಗೆ ಟ್ಯಾಗ್ ಮಾಡಿದ್ದರು. ನ್ಯೂ ಯಲಹಂಕ ಟೌನ್ ಬಳಿಯಿರುವ ತಮ್ಮ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಗೆ ರೋಹಿಣಿ ಸಿಂಧೂರಿಯವರು ಸಹಕಾರ ಕೊಟ್ಟಿದ್ದು, ಆ ಮೂಲಕ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಮತ್ತೆ ತಮ್ಮ ಟ್ರಸ್ಟ್ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.