ಚಾಮರಾಜನಗರ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಸೂಚನೆ ನೀಡಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ೩೯೬ ವಸತಿಗೃಹಗಳ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಹಬ್ಬ ಹರಿದಿನ ಜಾತ್ರಾ ಸಂದರ್ಭಗಳಲ್ಲಿ ಭಕ್ತರಿಗೆ ವಾಸ್ತವ್ಯಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು.
೧೦೮ ಅಡಿ ಎತ್ತರದ ಮಹದೇಶ್ವರ ಪ್ರತಿಮೆ ತಳ ಭಾಗದಲ್ಲಿ ನಡೆಯುತ್ತಿರುವ ಮಹದೇಶ್ವರ ಚರಿತ್ರೆ ತಿಳಿಸುವ ಪ್ರತಿಮೆ ಇತರೆ ಕಾಮಗಾರಿಗಳ ಕುರಿತು ಪರಿಶೀಲಿಸಿದ ಸಚಿವರು ಪ್ರತಿಮೆ ಉದ್ಘಾಟನೆಯಾಗಿ ೯ ತಿಂಗಳು ಕಳೆದಿದೆ. ಮುಂದುವರೆದ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸಬೇಕು. ಇನ್ನು ಒಂದು ತಿಂಗಳೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಮಲೆ ಮಹದೇಶ್ವರ ಸ್ವಾಮಿ ದರ್ಶನ ಮಾಡಲು ಬರುವ ಭಕ್ತರಿಗೆ ತಿರುಪತಿ ಮಾದರಿಯಲ್ಲಿ ೪೯ ಕೋಟಿ ವೆಚ್ಚದಲ್ಲಿ ಕ್ಯೂ ಲೈನ್ ಕಾಮಗಾರಿ ನಡೆಯುತ್ತಿದೆ. ನೆಲಮಹಡಿಯಲ್ಲಿ ನಾಲ್ಕು ಬ್ಲಾಕ್ ನಿರ್ಮಾಣ ಮಾಡುತ್ತಿದ್ದು ಮೂರು ಬ್ಲಾಕ್ ಗಳ ಕಾಮಗಾರಿ ಮುಗಿದಿದೆ ಒಂದು ಬ್ಲಾಕ್ ಕಾಮಗಾರಿ ಮಾತ್ರ ಬಾಕಿ ಇದ್ದು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು. ಮಜ್ಜನ ಬಾವಿ ಸಮೀಪದ ದೊಡ್ಡ ಕೆರೆ ಮೈದಾನದಲ್ಲಿ ಕಲ್ಯಾಣಿ ಕಾಮಗಾರಿ ಪ್ರಾರಂಭಿಸಲಾಗಿದೆ.
ಆದರೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಕಳೆದ ಮೂರು ವರ್ಷಗಳಿಂದ ತೆಪ್ಪೋತ್ಸವ ನಡೆದಿಲ್ಲ, ಆದ್ದರಿಂದ ಯುಗಾದಿ ಜಾತ್ರಾ ಮಹೋತ್ಸವದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ತೆಪ್ಪೋತ್ಸವಕ್ಕೆ ಮಾಡಿಕೊಳ್ಳ ಬೇಕು. ಮಹದೇಶ್ವರ ಬೆಟ್ಟಕ್ಕೆ ತಾಳಬೆಟ್ಟದಿಂದ ಬರುವ ಪಾದಯಾತ್ರಿಕರಿಗೆ ಅನುಕೂಲ ಕಲ್ಪಿಸಲು ಮೆಟ್ಟಿಲು ಕಾಮಗಾರಿಯನ್ನು ಬೇಗನೆ ಮುಗಿಸಬೇಕು. ಕಳೆದ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದ ಕಾಮಗಾರಿಗಳನ್ನು ಸಹ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿನ್ನಣ್ಣ, ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ್, ಇನ್ನಿತರ ಅಧಿಕಾರಿಗಳು ಹಾಜರಿದ್ದರು.
