ಚಾಮರಾಜನಗರ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಸಂಬಂಧ ಜಂಟಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ. ಈ ಕುರಿತು ಸಾರ್ವಜನಿಕವಾಗಿ ಪ್ರಕಟಪಡಿಸಿ ಆಕ್ಷೇಪಣೆಗಳಿದ್ದಲ್ಲಿ ಸ್ವೀಕರಿಸಿ ತ್ವರಿತವಾಗಿ ಮುಂದಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
ನಗರದ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆ, ಪ್ರವಾಹದಂತ ಪ್ರಕೃತಿ ವಿಕೋಪಗಳಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ ಬೆಳೆ ಹಾನಿ ವರದಿಯನ್ನು ನಿಖರವಾಗಿ ಪಡೆಯಲು ಜಂಟಿ ಸರ್ವೆ ಕಾರ್ಯವನ್ನು ಶೀಘ್ರ ಮುಗಿಸಬೇಕು. ಹಾನಿಯಾಗಿರುವ ಪ್ರತೀ ರೈತರ ಜಮೀನಿನಲ್ಲಿ ಕರಾರುವಕ್ಕಾಗಿ ಬೆಳೆಹಾನಿಯನ್ನು ಲೆಕ್ಕಾಚಾರ ಮಾಡಿ ವರದಿ ನೀಡಬೇಕು. ಈ ಸಂಬಂಧ ರೈತ ಸಂಪರ್ಕ ಕೇಂದ್ರಗಳು, ಮತ್ತಿತ್ತರ ಕಡೆ ಪ್ರಚುರಪಡಿಸಿ ಸಂಬಂಧಪಟ್ಟವರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಅಂತಿಮವಾಗಿ ಅರ್ಹರೆಲ್ಲರಿಗೂ ಪರಿಹಾರ ಸಿಗುವಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಮನೆಗಳ ಸಮೀಕ್ಷೆ ಕಾರ್ಯವು ತ್ವರಿತವಾಗಿ ಕೈಗೊಳ್ಳಬೇಕು. ಯಾವುದೇ ಹಾನಿ ಸಂಭವಿಸದಂತೆ ಮೊದಲೇ ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳ ವರದಿಯನ್ನು ಸಲ್ಲಿಸಬೇಕು. ಈ ಕಾರ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅರ್ಹರಿಗೆ ಮನೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಆದ್ಯತೆ ಮೇರೆಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು. ಪೂರ್ವ ಮುಂಗಾರಿನಲ್ಲಿ ಹಾನಿಯಾಗಿರುವ ಬೆಳೆಹಾನಿ ಸಂಬಂಧ ಈಗಾಗಲೇ ಅಂಕಿ ಅಂಶಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಭೂಮಿ ಪರಿಹಾರ ತಂತ್ರಾಂಶದಲ್ಲಿ ಎಲ್ಲಾ ಮಾಹಿತಿಯನ್ನು ಅಳವಡಿಸಲಾಗಿದ್ದು, ಬೆಳೆಹಾನಿ ಪರಿಹಾರ ವಿತರಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೃಷಿ ಇಲಾಖೆ ತೆಗೆದುಕೊಳ್ಳಬೇಕು. ಬಿತ್ತನೆ ಬೀಜ, ರಸಗೊಬ್ಬರಗಳು ಅಗತ್ಯಕ್ಕನುಗುಣವಾಗಿ ಪೂರೈಸಬೇಕು. ಎಲ್ಲಿಯೂ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಬೆಳೆ ಕಟಾವು ಪ್ರಯೋಗವನ್ನು ಕಂದಾಯ, ಕೃಷಿ, ಇನ್ನಿತರ ಇಲಾಖೆಗಳ ನೆರವಿನೊಂದಿಗೆ ನಡೆಸಬೇಕು. ತಹಶೀಲ್ದಾರರು ಈ ಕಾರ್ಯ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಮರ್ಪಕವಾಗಿ ಬೆಳೆ ಕಟಾವು ಪ್ರಯೋಗ ಆಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಮಾರ್ಗಸೂಚಿ ಅನುಸಾರ ಎಲ್ಲವನ್ನು ಪಾಲನೆ ಮಾಡಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಂಟಿ ಕೃಷಿ ನಿರ್ದೇಶಕರಾದ ಆಬೀದ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ.ಸುಧಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಎಲ್ಲ ತಾಲೂಕುಗಳ ತಹಶೀಲ್ದಾರರು, ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.