ಹೊಸೂರು : ರಾಜ್ಯದಲ್ಲಿ ಬರಗಾಲವಿದ್ದು, ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ತತ್ತರಿಸುತ್ತಿರುವ ಸಂದರ್ಭದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ರೈತ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳು ಕರೆದಿದ್ದ ಬಂದ್ ಪಟ್ಟಣದಲ್ಲಿ ಯಶಸ್ವಿಯಾಯಿತು.
ರೈತ ಸಂಘಟನೆಯ ಪದಾಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಮೆರವಣಿಗೆ ಆರಂಭಿಸಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಾಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ಕೇವಲ ಕಾನೂನು ಪಾಲನೆ ಮಾಡುವ ಉದ್ಧೇಶದಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಬರಗಾಲದಿಂದ ಕಂಗೆಟ್ಟಿರುವ ರಾಜ್ಯದ ರೈತರ ಹಿತವನ್ನು ಬಲಿಕೊಟ್ಟಿದೆ ಎಂದು ದೂರಿದ್ದಲ್ಲದೆ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡು ಸರ್ಕಾರವನ್ನು ಓಲೈಸಲು ನೀರು ಹರಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ನಮ್ಮ ರೈತರ ಹಿತ ಕಾಯುವ ಬದಲು ಕಾನೂನು ನೆಪ ಹೇಳಿ ಕೆಆರ್‌ಎಸ್ ಅಣೆಕಟ್ಟೆಯ ಅಕ್ಕಪಕ್ಕದ ನದಿಗಳಿಂದ ನೀರು ಬಿಡಿಸಿಕೊಂಡು ತಮಿಳುನಾಡಿಗೆ ಹರಿಸುತ್ತಿರುವುದು ಏತಕ್ಕಾಗಿ ಎಂದು ಪ್ರಶ್ನಿಸಿದ ರೈತ ಮುಖಂಡರು ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ರೈತರು ಮತ್ತು ರಾಜ್ಯದ ಜನತೆಯ ಬಗ್ಗೆ ಕಾಳಜಿಯಿಲ್ಲ ಎಂದು ದೂರಿದರು.
ಅಂಗಡಿ ಮುಂಗಟ್ಟುಗಳು ಬಂದಾಗಿತ್ತು. ಸರ್ಕಾರಿ ಸ್ವಾಮ್ಯದ ಬ್ಯಾಂಕು ಮತ್ತು ಕಚೇರಿಗಳು ಸಾರ್ವಜನಿಕರ ಕೆಲಸಕ್ಕೆ ಅವಕಾಶ ನೀಡದಿರುವುದರ ಮೂಲಕ ಬಂದ್‌ಗೆ ಬೆಂಬಲ ನೀಡಿದರು. ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸಂಜೆ ೫ರವರೆಗೂ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ವಾಹನಗಳು ರಸ್ತೆಗಿಳಿಯದ ಕಾರಣ ಪಟ್ಟಣದಲ್ಲಿ ಜನದಟ್ಟಣೆಯಿಲ್ಲದೆ ಬಿಕೋ ಎನ್ನುತ್ತಿತ್ತು.

ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಡಿಂಡಿಮಶoಕರ್, ಮಾಜಿ ಅಧ್ಯಕ್ಷ ಜಿ.ಪ್ರಕಾಶ್, ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ರೈತ ಮುಖಂಡರಾದ ಎಂ.ಎನ್.ನಾಗೇಶ್, ಎಂ.ಆರ್.ಮಲ್ಲೇಶ್, ನೇತ್ರಾವತಿ, ನಟರಾಜು, ಕೆಂಪೇಗೌಡ, ಗರುಡಗಂಭದಸ್ವಾಮಿ, ರಾಮಪ್ರಸಾದ್, ರಾಮಕೃಷ್ಣೇಗೌಡ, ರೇವಣ್ಣ, ಎಂ.ಎಸ್.ರಾಜೇಶ್, ಸುಧಾಕರ್, ಚರ‍್ನಹಳ್ಳಿಶ್ರೀನಿವಾಸ್, ಗಣೇಶ್, ಚಿಕ್ಕೇಗೌಡ, ರುದ್ರೇಶ್, ಕೆ.ಟಿ.ತ್ಯಾಗರಾಜು, ಅರುಣ್‌ಗನ್ನಾ ಸೇರಿದಂತೆ ಮುಸ್ಲಿಂ ಭಾಂದವರು, ಗಿರವಿ ಅಂಗಡಿ ಮಾಲೀಕರುಗಳು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.